ವಿಕಲ್ಪ ಹೆಸರಿನ ಈ ಯೋಜನೆ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಒಂದು ವೇಳೆ ಸೀಟು ಖಾತ್ರಿಯಾಗದೇ ಹೋದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ಮೇಲ್ದರ್ಜೆಯ ರೈಲಿನಲ್ಲಿ ಸೀಟು ಖಾಲಿ ಇದ್ದರೆ, ಪ್ರಯಾಣಿಕರು ಅದರಲ್ಲಿ ಸಂಚರಿಸಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಯಾವುದೇ ಹೆಚ್ಚಿನ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.
ನವದೆಹಲಿ(ಮಾ.22): ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲ್ವೆಗಳಿಗಾಗಿ ಕಾಯ್ದಿರಿಸಿದ ಟಿಕೆಟ್‌ಗೆ ಸೀಟು ಖಾತ್ರಿಯಾಗದೇ ಸಂದರ್ಭದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ರಾಜಧಾನಿ ಅಥವಾ ಶತಾಬ್ದಿ ರೈಲುಗಳಲ್ಲೂ ಪ್ರಯಾಣ ಬೆಳೆಸುವ ಅವಕಾಶ ಮಾಡಿಕೊಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ವಿಕಲ್ಪ ಹೆಸರಿನ ಈ ಯೋಜನೆ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಒಂದು ವೇಳೆ ಸೀಟು ಖಾತ್ರಿಯಾಗದೇ ಹೋದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ಮೇಲ್ದರ್ಜೆಯ ರೈಲಿನಲ್ಲಿ ಸೀಟು ಖಾಲಿ ಇದ್ದರೆ, ಪ್ರಯಾಣಿಕರು ಅದರಲ್ಲಿ ಸಂಚರಿಸಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಯಾವುದೇ ಹೆಚ್ಚಿನ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.
ಪರೀಕ್ಷಾರ್ಥವಾಗಿ 6 ಮಾರ್ಗಗಳ ರೈಲುಗಳಲ್ಲಿ ಜಾರಿಗೊಳಿಸಲಾದ ಯೋಜನೆ ಯಶಸ್ವಿ ಬಳಿಕ ಎಲ್ಲ ರೈಲು ಮಾರ್ಗಗಳಿಗೂ ವಿಸ್ತರಣೆಯಾಗುತ್ತಿದೆ.
ರಾಷ್ಟ್ರದ ಬಹುತೇಕ ಕಡೆ ಸಂಚರಿಸಲಿರುವ ಸುವಿಧಾ, ದುರೊಂತೊ, ಶತಾಬ್ದಿ ಮತ್ತು ರಾಜಧಾನಿಯಂಥ ಪ್ರೀಮಿಯರ್ ರೈಲುಗಳಲ್ಲಿ ದಿನವೊಂದಕ್ಕೆ ಖಾಲಿಯೇ ಉಳಿಯುವ 1.5 ಲಕ್ಷ ಸೀಟಿನ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವವೆನಿಸಿದೆ. ಹಲವು ಕಾರಣಗಳಿಗಾಗಿ ಪ್ರಯಾಣಿಕರು ರೈಲ್ವೆ ಟಿಕೆಟ್ ರದ್ದು ಮಾಡುವುದರಿಂದ ಪ್ರತಿ ವರ್ಷ 7,500 ಕೋಟಿ ಹಣವನ್ನು ರೈಲ್ವೆ ಇಲಾಖೆ ಮರುಪಾವತಿ ಮಾಡುತ್ತಿದೆ. ಇದನ್ನು ಕಡಿಮೆಗೊಳಿಸುವ ನೂತನ ಯೋಜನೆ ಸಹಕಾರಿಯಾಗುವ ಸಾಧ್ಯತೆಯಿದೆ.