ನವದೆಹಲಿ(ಜು.08): ಬರೋಬ್ಬರಿ 14 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿರುವ MNS ಮುಖ್ಯಸ್ಥ ರಾಜ್ ಠಾಕ್ರೆ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.

ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ ರಾಜ್ ಠಾಕ್ರೆ, ಸೋನಿಯಾ ಅವರಿಗೆ ಹೂಗುಚ್ಛ ನೀಡುವ ಮೂಲಕ ಸನ್ಮಾನಿಸಿದರು.

ಇವಿಎಂ ಯಂತ್ರಗಳ ದುರ್ಬಳಕೆ ಕುರಿತು ಇಬ್ಬರೂ ನಾಯಕರು ಚರ್ಚೆ ಮಾಡಿದ್ದಾರೆ ಎನ್ನಲಾಗಿದ್ದು, ದೇಶದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ದೀರ್ಘ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರನ್ನು ಭೇಟಿ ಮಾಡಿದ್ದ ರಾಜ್ ಠಾಕ್ರೆ, ಇವಿಎಂ ಮತಯಂತ್ರಗಳ ಮೇಲಿರುವ ಅನುಮಾನವನ್ನು ಬಗೆಹರಿಸುವಂತೆ ಆಗ್ರಹಿಸಿದ್ದರು.