ಡಾ. ರಾಜ್‌ಕುಮಾರ್ ಅವರು ಸಮಾಜಕ್ಕೆ ಯಾವುದಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದರು. ಆ ಹಿನ್ನೆಲೆಯಲ್ಲಿ ನಮ್ಮ ಕುಟುಂಬ ಈ ಅಕಾಡೆಮಿ ಸ್ಥಾಪಿಸಿದೆ. ಐಎಎಸ್, ಐಪಿಎಸ್, ಐಆರ್‌ಎಸ್‌ನಂತಹ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವವರು ತರಬೇತಿ ಪಡೆಯಬಹುದು. ಈ ಅಕಾಡೆಮಿ ಮೂಲ ಉದ್ದೇಶ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸುವುದಾಗಿದೆ

ಬೆಂಗಳೂರು(ಫೆ.18): ರಾಜ್ಯದ ಅವಕಾಶ ವಂಚಿತ ಪ್ರತಿಭಾವಂತ ಮಕ್ಕಳಿಗೆ ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ನೂತನವಾಗಿ ಡಾ. ರಾಜ್‌ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ ತೆರೆಯಲಾಗುತ್ತಿದೆ ಎಂದು ನಟ ಹಾಗೂ ಅಕಾಡೆಮಿಯ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದ ಐಎಎಸ್ ಆಕಾಂಕ್ಷಿಗಳು ತರಬೇತಿಗಾಗಿ ದೆಹಲಿ ಸೇರಿದಂತೆ ಬೇರೆ ರಾಜ್ಯಗಳ ನಗರಗಳಿಗೆ ಹೋಗುವಂತಹ ಸ್ಥಿತಿ ಉದ್ಭವಿಸಿದೆ. ಅಲ್ಲದೆ ಕೇಂದ್ರ ನಾಗರಿಕ ಸೇವೆಗಳಲ್ಲಿ ನಮ್ಮ ಕರ್ನಾಟಕ ಅಭ್ಯರ್ಥಿಗಳ ಯಶಸ್ಸು ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರವಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕನ್ನಡದ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಅಕಾಡೆಮಿ ಪ್ರಾರಂಭಿಸಲಾಗುತ್ತಿದೆ ಎಂದರು.

ನಮ್ಮ ತಂದೆ ಡಾ. ರಾಜ್‌ಕುಮಾರ್ ಅವರು ಸಮಾಜಕ್ಕೆ ಯಾವುದಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದರು. ಆ ಹಿನ್ನೆಲೆಯಲ್ಲಿ ನಮ್ಮ ಕುಟುಂಬ ಈ ಅಕಾಡೆಮಿ ಸ್ಥಾಪಿಸಿದೆ. ಐಎಎಸ್, ಐಪಿಎಸ್, ಐಆರ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವವರು ತರಬೇತಿ ಪಡೆಯಬಹುದು. ಈ ಅಕಾಡೆಮಿ ಮೂಲ ಉದ್ದೇಶ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸುವುದಾಗಿದೆ ಎಂದು ಹೇಳಿದರು.

ದೇಶದ ವಿವಿಧ ಭಾಗಗಳ 150ಕ್ಕೂ ಹೆಚ್ಚು ಐಎಎಸ್, ಐಪಿಎಸ್, ಐಆರ್‌ಎಸ್ ಮತ್ತಿತರ ಸೇವೆಗಳ ಅಧಿಕಾರಿಗಳು, ಅನುಭವವುಳ್ಳ ಬೋಧಕರು ಅಕಾಡೆಮಿಯಲ್ಲಿ ತರಬೇತಿ ನೀಡಲು ಒಪ್ಪಿದ್ದಾರೆ. ಕನ್ನಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಇತರೆ ಅಕಾಡೆಮಿಗಿಂತ ಶೇ. 50 ಕಡಿಮೆ ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಕಾಡೆಮಿ ಉದ್ಘಾಟಿಸಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಡಾ. ರಾಜ್‌ಕುಮಾರ್ ಅವರ ಹುಟುಹಬ್ಬದ ದಿನವಾದ ಏಪ್ರಿಲ್ 14ರಿಂದ ತರಗತಿಗಳು ಪ್ರಾರಂಭವಾಗಲಿವೆ. ಮೊದಲ ಹಂತದಲ್ಲಿ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಅಕಾಡೆಮಿ ತೆರೆಯಲಾಗುತ್ತಿದೆ. ಇಲ್ಲಿನ ಯಶಸ್ಸನ್ನು ಆ‘ರಿಸಿ ಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವುದಾಗಿ ತಿಳಿಸಿದರು. ಅಕಾಡೆಮಿ ಅಧ್ಯಪಕ ಗಿರೀಶ್ ಇನ್ನಿತರರು ಇದ್ದರು.