ನವದೆಹಲಿ(ಮಾ.15): ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಮೊದಲ ತಲೆದಂಡವಾಗಿದೆ.

ಕಾಂಗ್ರೆಸ್‌'ನಲ್ಲಿ ರಚನಾತ್ಮಕ ಬದಲಾವಣೆ ಮಾಡಬೇಕು ಎಂದು ಕೇಳಿಬರುತ್ತಿರುವ ಒತ್ತಾಯದ ಬೆನ್ನಲ್ಲೇ, ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್, ಸೋಲಿನ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

"ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ನನಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಅದನ್ನು ನಿಭಾಯಿಸುವಲ್ಲಿ ವಿಫಲನಾಗಿದ್ದೇನೆ" ಎಂದು ಹೇಳಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. ಪಕ್ಷದಲ್ಲಿ ಸಂಘಟಿತ ಜವಾಬ್ದಾರಿಯ ಅಗತ್ಯವಿದೆ. ಪಕ್ಷವನ್ನು ಎಲ್ಲರೂ ಸೇರಿ ಮರು ನಿರ್ಮಾಣ ಮಾಡಬೇಕಿದೆ ಎಂದು ಕಾಂಗ್ರೆಸ್ ಮಾಜಿ ಸಂಸದೆ ಪ್ರಿಯಾ ದತ್ ಹೇಳಿದ್ದಾರೆ.