Raita Ratna Award 2022: ರೈತರಿಗಾಗಿ ಕೃಷಿ ಯಂತ್ರೋಪಕರಣ ನಿರ್ಮಿಸುವ ಎನ್‌.ಕೆ. ಆಕಾಶ್‌

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಕೊಡಗಿನ ಬೆಳಿಗೇರಿಯ ಕೃಷಿ ಯಂತ್ರೋಪಕರಣ ಸಂಶೋಧಕ ಆಕಾಶ್‌ ಎನ್‌ ಕೆ ಅವರಿಗೆ ಸಂದಿದೆ. ಸಾಧಕ ರೈತನಿಗೆ ಗೌರವ ಸಮರ್ಪಣೆ.

Raita Ratna Award 2022 Technology in Agriculture category winner Akash NK from Kodagu gvd

ವಿಘ್ನೇಶ್‌ ಎಂ. ಭೂತನಕಾಡು

ಕಾರ್ಮಿಕರ ಸಮಸ್ಯೆಯಿಂದ ನಲುಗುತ್ತಿರುವ ರೈತರಿಗೆ ಬೆನ್ನೆಲು ಬಾಗಿ ನಿಂತು, ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು ಸಂಶೋಧಿಸಿದ ಯುವಕ ಕೊಡಗಿನ ಬಿಳಿಗೇರಿಯ ಆಕಾಶ್‌ ಎನ್‌ ಕೆ. ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿ ಕೆಲಸಕ್ಕೆ ತಕ್ಕ ಪ್ರೋತ್ಸಾಹ ಸಿಗದ ಹಿನ್ನೆಲೆಯಲ್ಲಿ ಬೇಸತ್ತು, ತಮ್ಮ ಮನೆಯ ಅಂಗಳದಲ್ಲೇ ಗ್ಯಾರೇಜ್‌ ಮಾಡಿಕೊಂಡವರು ಆಕಾಶ್‌. ಆ ಜಾಗದಲ್ಲೇ ರೈತರಿಗೆ ಅನುಕೂಲವಾಗುವ, ಅವರ ಬೇಡಿಕೆಗೆ ತಕ್ಕಂಥಾ ಕೃಷಿ ಯಂತ್ರೋಪಕರಣಗಳನ್ನು ನಿರ್ಮಿಸಿಕೊಡುತ್ತಿದ್ದಾರೆ. 

ಸಣ್ಣ ವಯಸ್ಸಿನಿಂದಲೂ ಮೆಕ್ಯಾನಿಕಲ್‌ ಕೆಲಸಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಆಕಾಶ್‌, ಸಣ್ಣ ಪುಟ್ಟ ಆಟವಾಡುವ ಗಾಡಿಗಳನ್ನು ಮಾಡಿದ್ದರು. ಬೇರೆ ಬೇರೆ ಕಂಪನಿಗಳ ಬೈಕ್‌ ಹಾಗೂ ಕಾರುಗಳನ್ನು ನೋಡುವಾಗ ಇವರಿಗೂ ಈ ರೀತಿ ಮಾಡಬೇಕೆಂಬ ಉತ್ಸಾಹ ಇತ್ತು. ಇದೇ ಹುಮ್ಮಸ್ಸಿನಲ್ಲಿ ರೈತರಿಗಾಗಿ ವಿವಿಧ ಮಾದರಿಯ ಯಂತ್ರೋಪಕರಣಗಳನ್ನು ನಿರ್ಮಿಸಿದರು. ಐಟಿಐ ಮೆಕ್ಯಾನಿಕಲ್‌ ವ್ಯಾಸಂಗ ಮಾಡಿರುವ ಆಕಾಶ್‌, ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗಿ ಟಾಟಾ ಮೋಟಾರ್ಸ್‌, ಮಾರುತಿ, ಬಾಷ್‌, ಟಿವಿಎಸ್‌ ಸೇರಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಈ ಅನುಭವದ ಹಿನ್ನೆಲೆ ಅವರ ಈಗಿನ ಕೆಲಸಕ್ಕೆ ಸಹಕಾರಿಯಾಗಿದೆ.

Raita Ratna Award 2022 ಉಡುಪಿಯ ಅಪರೂಪದ ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ!

ಆಕಾಶ್‌ ಅವರದ್ದು ಕೃಷಿ ಕುಟುಂಬ. ಇವರಿಗೆ ಕಾಫಿ ತೋಟ ಹಾಗೂ ಭತ್ತದ ಗದ್ದೆ ಇದೆ. ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಕೂಲಿ ಕಾರ್ಮಿಕರು ದೊರಕುತ್ತಿಲ್ಲ. ಇದರಿಂದ ತನ್ನ ತೋಟಕ್ಕೆ ಬೇಕಾಗುವ ಆಧುನಿಕ ಯಂತ್ರಗಳನ್ನು ಕಂಡುಹಿಡಿದರು. ಕಾಫಿ ಹಣ್ಣನ್ನು ಶುಚಿಗೊಳಿಸುವ ಯಂತ್ರ, ಕಾಳು ಮೆಣಸು ಬೇರ್ಪಡಿಸುವುದು, ತೂಕದ ವಸ್ತುಗಳನ್ನು ಸಾಗಿಸುವ ಟ್ರಾಲಿ, ಏಲಕ್ಕಿ ಒಣಗಿಸುವ ಯಂತ್ರ, ಸೌದೆ ಸಾಗಿಸುವುದು, ಭತ್ತದ ಫಸಲು ಬೇರ್ಪಡಿಸುವ ಯಂತ್ರ ಹೀಗೆ ಹಲವು ಮಾದರಿಯ ಯಂತ್ರಗಳನ್ನು ಕಂಡುಹಿಡಿದು ಸಾಧನೆ ಮಾಡಿದ್ದಾರೆ.

ಆರಂಭದಲ್ಲಿ ಪೆಡಲ್‌ ಮಾಡುವ ವಾಹನವನ್ನು ನಿರ್ಮಿಸಿದ್ದರು. ಆಗ ಇವರ ಅಜ್ಜ ಮಹಾಬಲೇಶ್ವರ ಭಟ್‌ ಅವರು, ‘ಈ ವಾಹನ ಅಂಗಳದಲ್ಲಿ ಮಾತ್ರ ಓಡಿಸಲು ಸಾಧ್ಯ. ರಸ್ತೆಗೆ ಹೋಗಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದರು. ಇದರಿಂದ ಆಕಾಶ್‌ ಹೊಸ ಪ್ರಯೋಗಗಳನ್ನು ಮಾಡಲು ತೊಡಗಿಸಿಕೊಂಡರು. ಮಿನಿ ಬೈಕ್‌, ಕೃಷಿ ಯಂತ್ರೋಪಕರಣಗಳನ್ನು ಸೃಷ್ಟಿಸಿ ಸಾಧನೆ ಮಾಡಿದರು.

ಈವರೆಗೆ ಆರು ಬೈಕ್‌ಗಳನ್ನು ನಿರ್ಮಿಸಿರುವ ಆಕಾಶ್‌, ಹೋಂ ಸ್ಟೇ, ರೆಸಾರ್ಚ್‌ಗಳಲ್ಲಿ ಮನರಂಜನೆಗಾಗಿ ರೈಡ್‌ ಮಾಡುವ ವಾಹನಗಳನ್ನು ಕೂಡ ನಿರ್ಮಿಸಿದ್ದಾರೆ. ಪುತ್ತೂರಿನ ಮಾಣಿಯಲ್ಲಿ ಎಲೆಕ್ಟ್ರಿಕಲ್‌ ಕಾರ್‌ ತಯಾರಿಸಿದ್ದಾರೆ. ಈ ಕಾರನ್ನು 3 ಗಂಟೆ ಚಾರ್ಜ್ ಮಾಡಿದರೆ 70 ಕಿ.ಮೀ. ಚಲಿಸಬಹುದಾಗಿದೆ. 1.50 ಲಕ್ಷ ರು.ನಲ್ಲಿ ಈ ಕಾರು ನಿರ್ಮಾಣಗೊಂಡಿದೆ. ತನ್ನ ಸ್ವಂತ ದುಡಿಮೆಯಲ್ಲಿ ಮುನ್ನಡೆಯಬೇಕೆಂಬ ನಿಟ್ಟಿನಲ್ಲಿ ಆಕಾಶ್‌ ಇದೀಗ ಕೃಷಿಕರಿಗೆ ವಿವಿಧ ಬಗೆಯ ಯಂತ್ರೋಪಕರಣಗಳನ್ನು ನಿರ್ಮಿಸುವ ಮೂಲಕ ಕೃಷಿಕರಿಗೆ ನೆರವಾಗಿದ್ದಾರೆ. ಆಕಾಶ್‌ನಂತಹ ಪ್ರತಿಭೆ ಹಲವು ಯುವಕರಿಗೆ ಮಾದರಿ.

Raita Ratna Award 2022: ಪರಿಸರ ಸ್ನೇಹಿ ಬದುಕಿನ ಪಾಠ ಹೇಳುವ ಅನ್‌ಮೋಲ್‌ ಶಾಲೆ

ಆಕಾಶ್‌ ಸಂಪರ್ಕ ಸಂಖ್ಯೆ: 9591774197

ರೈತರ ಬೇಡಿಕೆಗೆ ಅನುಗುಣವಾಗಿ ಯಂತ್ರಗಳನ್ನು ನಿರ್ಮಿಸಿ ರೈತರಿಗೆ ಕಡಿಮೆ ದರದಲ್ಲಿ ವಿತರಿಸುತ್ತೇನೆ. ನನ್ನ ಕೆಲಸವನ್ನು ಗುರುತಿಸಿ ರೈತ ರತ್ನ ಪ್ರಶಸ್ತಿ ನೀಡಿದ ಕನ್ನಡಪ್ರಭ, ಸುವರ್ಣ ನ್ಯೂಸ್‌ಗೆ ಧನ್ಯವಾದ.
-ಆಕಾಶ್‌, ರೈತರತ್ನ ಪ್ರಶಸ್ತಿ ಪುರಸ್ಕೃತರು


"

Latest Videos
Follow Us:
Download App:
  • android
  • ios