Asianet Suvarna News Asianet Suvarna News

Raita Ratna Award 2022 ಉಡುಪಿಯ ಅಪರೂಪದ ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ!

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಉಡುಪಿಯ ಪೆರ್ಡೂರಿನ ತಳಿ ಸಂರಕ್ಷಕ ಗುರುರಾಜ ಬಾಳ್ತಿಲ್ಲಾಯ ಅವರಿಗೆ ಸಂದಿದೆ. ಸಾಧಕ ರೈತರಿಗೆ ಗೌರವ ಸಮರ್ಪಣೆ.

Raita Ratna Award 2022 Modern Farmer category winner Gururaj Baliltaya from Udupi vcs
Author
Bangalore, First Published Apr 14, 2022, 9:32 AM IST

- ಸುಭಾಶ್ಚಂದ್ರ ವಾಗ್ಲೆ

ಹೇಗಾದರೂ ಪ್ರಚಾರ ಪಡೆಯಬೇಕು ಎನ್ನುವವರ ಮಧ್ಯೆ, ‘ನನಗೆ ಪ್ರಚಾರವೇ ಬೇಡ, ನನ್ನ ಬಗ್ಗೆ ಬರೆಯಲೇಬೇಡಿ, ನನ್ನಷ್ಟಕ್ಕೆ ಕೆಲಸ ಮಾಡಲು ಬಿಡಿ..’ ಎನ್ನುವ ಅಪರೂಪದ ಸಾಧಕ ಗುರುರಾಜ ಬಾಳ್ತಿಲ್ಲಾಯ. ಅವರು ಹಣ್ಣಿನ ಗಿಡಗಳ, ತಳಿಗಳ ಸಂವರ್ಧನೆಯಲ್ಲಿ ನಡೆದಾಡುವ ವಿಶ್ವಕೋಶ. ಹಲಸಿನ ಬಗ್ಗೆ ಪ್ರೀತಿ ಜಾಸ್ತಿ. ಇದುವರೆಗೆ 213ಕ್ಕೂ ಹೆಚ್ಚು ಹಲಸಿನ ತಳಿಗಳನ್ನು ಗುರುತಿಸಿದ್ದಾರೆ. ಸಂವರ್ಧನೆಗೊಳಿಸಿದ್ದಾರೆ. ಪ್ರಸ್ತುತ ಪೆರ್ಡೂರು ಗ್ರಾಮದಲ್ಲಿ ನವಸಿರಿ ನರ್ಸರಿಯನ್ನು ನಡೆಸುತ್ತಿದ್ದಾರೆ. ಅದನ್ನು ನರ್ಸರಿ ಎನ್ನುವುದಕ್ಕಿಂದ ಪ್ರಯೋಗಶಾಲೆ ಎನ್ನುವುದೇ ಹೆಚ್ಚು ಸರಿ. ಅವರ ನರ್ಸರಿಯ ಗೇಟಲ್ಲಿ ‘ಗಿಡಗಳು ಲಭ್ಯವಿಲ್ಲ’ ಎಂಬ ಬೋರ್ಡು ಇದೆ. ನರ್ಸರಿಯಲ್ಲಿ ಗಿಡ ಮಾರಾಟ ಮಾಡಲು, ಬಂದವರನ್ನು ಮಾತನಾಡಿಸಲು ಸಮಯವಿಲ್ಲದಷ್ಟುಕಸಿ ಕಟ್ಟುವ ಕಾರ್ಯದಲ್ಲಿ ವ್ಯಸ್ತರಾಗಿರುತ್ತಾರೆ.

30 ವರ್ಷಗಳ ಹಿಂದೆ ಕಸಿ ಕಟ್ಟುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡ ಬಾಳಿಲ್ತಾಯರು 12 ವರ್ಷಗಳಿಂದ ಪೂರ್ಣಕಾಲಿಕ ಕಸಿತಜ್ಞರಾಗಿದ್ದು, ದಿನಕ್ಕೆ ನೂರಿನ್ನೂರು ಗಿಡಗಳಿಗೆ ಕಸಿ ಕಟ್ಟುತ್ತಾರೆ. ಅವರು ತಾವು ಕಸಿ ಕಟ್ಟಿದ ಗಿಡಗಳ ಸಂಖ್ಯೆ ಎಷ್ಟುಲಕ್ಷ ಎಂಬುದನ್ನು ಲೆಕ್ಕವಿಟ್ಟಿಲ್ಲ. ರುಚಿ, ಬಣ್ಣ, ರೋಗನಿರೋಧಕ ಶಕ್ತಿಯ ಕಾರಣಕ್ಕೆ ಭಾರಿ ಬೇಡಿಕೆಯಲ್ಲಿರುವ ತುಮಕೂರು ಜಿಲ್ಲೆಯ ಸಿದ್ದು ಹಲಸಿನ ಹಣ್ಣಿನ ತಳಿ ಅಭಿವೃದ್ಧಿಗೆ ಬಾಳಿಲ್ತಾಯ ಅವರು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐ.ಎಚ್‌.ಆರ್‌.ಸಿ.)ಯಿಂದ ಅಧಿಕೃತವಾಗಿ ನಿಯೋಜಿಸಲ್ಪಟ್ಟಿದ್ದಾರೆ. 3 ವರ್ಷಗಳಿಂದ ಸಿದ್ದು ಹಲಸಿನ 50 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಕಸಿ ಕಟ್ಟಿಐಎಚ್‌ಆರ್‌ಸಿಗೆ ಪೂರೈಸಿದ್ದಾರೆ. ಇನ್ನೂ ಹತ್ತಿಪ್ಪತ್ತು ಸಾವಿರ ಸಸಿಗಳಿಗೆ ಬೇಡಿಕೆ ಬಂದಿದೆ. ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಹಲಸಿನ ತಳಿ ಸಂವರ್ಧನೆಗೊಳಿಸಿದ್ದಾರೆ. ಸಿಂಗಾಪುರ, ಮಲೇಶಿಯಾ, ಹವಾಯಿ ದ್ವೀಪ, ಥಾಯ್ಲೆಂಡಿನಿಂದಲೂ ಹಲಸಿನ ಗಿಡಗಳನ್ನು ತರಿಸಿ, ಕಸಿಗೊಳಪಡಿಸಿದ್ದಾರೆ. ಅವು ಇಂದು ರಾಜ್ಯದ ವಿವಿಧ ಕೃಷಿಕರ ಜಮೀನುಗಳಲ್ಲಿ ಬೆಳೆದು ಫಲ ಕೊಡುತ್ತಿವೆ.

Raita Ratna 2022 ಧಾರವಾಡ ಮಂಡಿಹಾಳದ ಸ್ವಾವಲಂಬಿ ರೈತ ಮಹಿಳೆ ಲಕ್ಷ್ಮವ್ವ ಹಡಪದ

ಕನ್ನಡಪ್ರಭ ಕಚೇರಿಯಿಂದ ನನಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಕರೆ ಬಂದಾಗ ನನಗೆ ಅಚ್ಚರಿಯಾಯಿತು. ನಾನು ಯಾವ ಪ್ರಶಸ್ತಿಗೂ ಅರ್ಜಿ ಹಾಕಿದವನಲ್ಲ. ನಾನು ಬಯಸದೆ, ನಿರೀಕ್ಷಿಸದೆ ಬಂದ ಈ ಪ್ರಶಸ್ತಿಗೆ ಬಹಳ ಬೆಲೆ ಇದೆ, ಬಹಳ ಖುಷಿ ಆಗಿದೆ. - ಗುರುರಾಜ ಬಾಳ್ತಿಲ್ಲಾಯ, ರೈತರತ್ನ ಪ್ರಶಸ್ತಿ ವಿಜೇತರು

40- 45 ಕೆ.ಜಿ. ತೂಗುವ ಹಲಸಿನ ಹಣ್ಣಿನ ಬಡಾಪಸಂದ್‌ ತಳಿ, ಕೇವಲ 200 ಗ್ರಾಂ ತೂಕದ ಅಡಕೆಗಾತ್ರದ ಹಲಸಿನ ಹಣ್ಣಿನ ಛೋಟಾಪಸಂದ್‌ ತಳಿ, 3 ಅಡಿ ಉದ್ದದ ಹಲಸಿನ ಹಣ್ಣಿನ ಮುಜ್ಜುಬಾಲ ತಳಿ, ನವೆಂಬರ್‌ನಲ್ಲಿ ಫಲ ಕೊಡುವ ತಮಿಳುನಾಡಿನ ಐಯ್ಯರ್‌ 11, ನೆಟ್ಟು 12 ವರ್ಷಗಳ ನಂತರ ಫಲ ಕೊಡುವ ಮಂಕಾಳೆ ರೆಡ್‌, 2 ವರ್ಷಗಳಲ್ಲಿ ಫಲ ಕೊಡುವ ಮಂಗಳೂರು ಆಲ್‌ ಸೀಸನ್‌, ಲೋಡುಗಟ್ಟಲೆ ಹಲಸು ಬೆಳೆಯುವ ಮನಮೋಹನ, ವರ್ಷವಿಡಿ ಫಲ ಕೊಡುವ ಬೊಂದೆಲ್‌ ಚಂದ್ರ ಬಕ್ಕೆ ತಳಿಗಳಲ್ಲದೇ, ಅತಿಮಧುರ, ಪ್ರಶಾಂತಿ, ಅನನ್ಯ ಇತ್ಯಾದಿಗಳು ದೇಸಿಯ ತಳಿ ಸಂವರ್ಧಿಸಿದ್ದಾರೆ. ಬೀಜವೇ ಇಲ್ಲದ ಥಾಯ್ಲೆಂಡಿನ ಮಿಟ್‌ ಕಾಂಗ್‌ ನಟ್‌ ತಳಿ, ಬೇಗ ಫಲ ಕೊಡುವ ವಿಯೆಟ್ನಾಂ ಅರ್ಲಿ, ಜೇನಿನಂತೆ ಸಿಹಿಯಾಗಿರುವ ನಂಕ ಕಿಂಗ್‌ ಮಾಢು, ಮಸ್ತೂರ್‌ ಇತ್ಯಾದಿ ವಿದೇಶಿ ತಳಿಯ ಹಲಸಿನ ಹಣ್ಣಿನ ಗಿಡಗಳನ್ನು ಕಸಿ ಕಟ್ಟಿದ್ದಾರೆ.

Raita Ratna award 2022 ಗಿರ್‌ ಗೋಸಾಕಣೆಯಲ್ಲಿ ಮ್ಯಾಜಿಕ್‌ ಸೃಷ್ಟಿಸಿದ ಬೆಳ್ತಂಗಡಿಯ ಅಭಿನಂದನ್‌

ಶ್ರೀಪಡ್ರೆಯವರು ಮಲೇಶ್ಯಾದಿಂದ ತರಿಸಿದ, ವಿಶ್ವದ ನಂ.1 ಜೆ 32 ತಳಿಯ ಗಿಡದ 1 ಕಡ್ಡಿಯಿಂದ ಕಸಿ ಮಾಡಿ ಅನೇಕ ಗಿಡ ಉತ್ಪಾದಿಸಿದ್ದಾರೆ. ಜೊತೆಗೆ ಸುಮಾರು 218 ವಿಶಿಷ್ಟತಳಿಗಳನ್ನು ಪತ್ತೆ ಮಾಡಿದ್ದಾರೆ. ಇವರು ಕಸಿಯ ವಿಧಾನಗಳಾದ ಮೊಳಕೆ ಕಸಿ, ಪಾಶ್ರ್ವ ಕಸಿ, ಕಣ್ಣು ಕಸಿ, ಕ್ಲಿಪ್‌ ಕಸಿ ವಿಧಾನಗಳಲ್ಲೂ ಪರಿಣಿತರು. ಬೇಡಿಕೆಯ ಮೇರೆಗೆ ವಿದೇಶದ ಡೊರಿಯನ್‌, ಮ್ಯಾಂಗೊಸ್ಟಿನ್‌, ಅವಕಾಡೊ, ಹಸ್‌ ಅವಕಾಡೊ, ಪುಲಸನ್‌, ರಾಂಬೂಟನ್‌, ಚಂಪಡಕ್‌, ಲಾಂಗೂನ್‌, ಸೀಡ್ಲೆಸ್‌ ಲೈಮ್‌ ಇತ್ಯಾದಿಗಳನ್ನು ಸಂವರ್ಧನೆಗೊಳಿಸಿ ಪೂರೈಸಿದ್ದಾರೆ.

"

Follow Us:
Download App:
  • android
  • ios