ಬೆಂಗಳೂರು: ಈ ವರ್ಷ ಎಲ್ಲೆಡೆ ಅವಧಿಗಿಂತ ಮುನ್ನವೇ ಬೇಸಿಗೆ ಆರಂಭವಾಗಿದೆ. ಮಾರ್ಚ್,  ಏಪ್ರಿಲ್‌ ಹಾಗೂ ಮೇ ತಿಂಗಳ ಅವಧಿಯಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ ಶೇ.2 ಡಿಗ್ರಿ ಸೆಲ್ಸಿಯಸ್‌ ಏರಲಿದೆ, ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಬಿಸಿ ಗಾಳಿ ಬೀಸುವ ಬಗ್ಗೆಯೂ ಎಚ್ಚರಿಸಿದೆ. ಈ ಬೆನ್ನಲ್ಲೇ ಅದೇ KSNDMC ಮನಸ್ಸಿಗೆ ತಂಪಾಗುವ ಸುದ್ದಿಯನ್ನು ನೀಡಿದ್ದು, ಇನ್ನು ಮುಂದಿನ 24 ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕ ಟ್ವೀಟ್ ಮಾಡಿದೆ. 'ಈಗಲೇ ಹಿಂಗೆ, ಇನ್ನು ಮುಂದೆ ಹೇಗೋ...' ಎಂದು ಆತಂಕಗೊಂಡಿರುವ ಜನರಿಗೆ ಮಳೆ ಸಿಂಚನ ಸುದ್ದಿಯೇ ತಂಪೆರೆಗಿದಂತಾಗಿದೆ. ಮಳೆ ಬಂದು, ತಾಪ ಕಡಿಮೆಯಾಗಲೆಂಬುವುದು ಜನರ ಆಶಯ.

ಬಿಸಿ ಗಾಳಿಯಿಂದ ರಾತ್ರಿ ವೇಳೆಯೂ ಸೆಕೆ ಪ್ರಮಾಣ ಹೆಚ್ಚುತ್ತಿದೆ. ರಾಜ್ಯಾ​ದ್ಯಂತ ಸರಾಸರಿ ರಾತ್ರಿ 22 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಮುನ್ಸೂಚನೆಯನ್ನು ನೀಡಿದಹವಾಮಾನ ಇಲಾಖೆ, ತಮಿಳುನಾಡು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಅಲರ್ಟ್ ಮಾಡಿದ್ದು, ಜನತೆ ಎಚ್ಚರಿಕೆಯಿಂದ ಇರಲು ಅಲರ್ಟ್ ಮಾಡಿದೆ. 

 


ಹೇಗಿರುತ್ತೆ ಈ ವರ್ಷದ ಮಳೆ?
2019ರಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ವಲಯದ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್‌ ಭವಿಷ್ಯ ನುಡಿದಿದೆ.

 

ಪೆಸಿಫಿಕ್‌ ಮಹಾಸಾಗರದಲ್ಲಿ ಎಲ್‌ನಿನೋ ಸಾಧ್ಯತೆ ಕ್ಷೀಣಿಸುತ್ತಿರುವುದರಿಂದ ಈ ಬಾರಿ ಸಾಮಾನ್ಯ ಮುಂಗಾರು ಸುರಿಯುವ ಶೇ.50ಕ್ಕಿಂತ ಹೆಚ್ಚಿನ ಸಾಧ್ಯತೆ ಕಂಡು ಬಂದಿದೆ. ಹೆಚ್ಚುವರಿ ಮಳೆ ಸುರಿಯುವ ಅತೀ ಕಡಿಮೆ ಸಾಧ್ಯತೆ ಇದೆ ಎಂದು ಸ್ಕೈಮೆಟ್‌ ಸಿಇಒ ಜತಿನ್‌ ಸಿಂಗ್‌ ಹೇಳಿದ್ದಾರೆ.

ಕಳೆದ 50 ವರ್ಷಗಳ ಮಳೆಯ ಸರಾಸರಿಯ ಪೈಖಿ ಶೇ.96ರಿಂದ ಶೇ.104ರಷ್ಟುಮಳೆ ಆದರೆ, ಅದನ್ನು ಸಾಮಾನ್ಯ ಮುಂಗಾರು ಮಳೆ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಸರಾಸರಿ 89 ಸೆಂ.ಮೀ. ಮಳೆ ಸುರಿಯುತ್ತದೆ.

ಭಾರತದ ವಾರ್ಷಿಕ ಮಳೆಯ ಶೇ.70ರಷ್ಟುಮಳೆ ಮುಂಗಾರು ಅವಧಿಯಲ್ಲೇ ಸುರಿಯುತ್ತದೆ. 2018ರಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಸುರಿದಿತ್ತು. ಆರಂಭದಲ್ಲಿ ಸಾಮಾನ್ಯ ಮುಂಗಾರಿನ ನಿರೀಕ್ಷೆ ಇದ್ದರೂ ಶೇ.9ರಷ್ಟು ಮಳೆ ಕೊರತೆಯೊಂದಿಗೆ ಮುಂಗಾರು ಮುಕ್ತಾಯಗೊಂಡಿತ್ತು. ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಪ್ರವಾಹ ಉಂಟಾಗಿದ್ದರೆ, ಉಳಿದ ಭಾಗದಲ್ಲಿ ಮಳೆಯ ಕೊರತೆ ಆಗಿತ್ತು.