ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು[ಆ.14]: ಕಳೆದ ಕೆಲ ದಿನಗಳಿಂದ ಸುರಿದು ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಮಳೆ ಸಾಮಾನ್ಯ ಮಳೆಯಲ್ಲ, ಇದು ಶತಮಾನದ ಮಹಾಮಳೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಪಡಿಸಿದೆ.

ಹೌದು, ಆಗಸ್ಟ್‌ ಮಾಸದ ಎರಡನೇ ವಾರದಲ್ಲಿ ಸುರಿದ ಮಳೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಬಾರಿ ಅಂದರೆ ಆ.3ರಿಂದ 10ವರೆಗೆ ರಾಜ್ಯದಲ್ಲಿ ಸುರಿದಂತಹ ಮಹಾಮಳೆ ಒಂದು ಶತಮಾನದಿಂದ ಸುರಿದಿರಲಿಲ್ಲ. ಕರಾರುವಾಕ್ಕಾಗಿ ಹೇಳುವುದಾದರೆ ಇಷ್ಟುಮಳೆ 118 ವರ್ಷಗಳಿಂದ ಆಗಿಲ್ಲ. ಇನ್ನು 118 ವರ್ಷಗಳಿಗಿಂತ ಹಿಂದೆ ರಾಜ್ಯ ಇಂತಹ ಮಳೆ ಕಂಡಿತ್ತೇ ಎಂಬ ಅಂಕಿ ಅಂಶ ಖುದ್ದು ಹವಾಮಾನ ಇಲಾಖೆಯ ಬಳಿಯೂ ಇಲ್ಲ.

ರಾಜ್ಯದಲ್ಲಿ ಮಳೆಯ ಪ್ರಮಾಣ ದಾಖಲು ಮಾಡುವ ವ್ಯವಸ್ಥೆ ಆರಂಭವಾಗಿದ್ದು 1901ರಲ್ಲಿ. ಅದಕ್ಕೆ ಹಿಂದಿನ ಮಳೆಯ ದಾಖಲೆಗಳು ಲಭ್ಯವಿಲ್ಲ. ಹೀಗಾಗಿ, 1901ರ ನಂತರದ ಆಗಸ್ಟ್‌ ಮಾಹೆಯ ಎರಡನೇ ವಾರದಲ್ಲಿ ಸುರಿದ ಅತಿ ದೊಡ್ಡ ಮಳೆ ಇದಾಗಿದ್ದು, ಒಟ್ಟಾರೆ 224 ಮಿ.ಮೀ. ಮಳೆಯನ್ನು ಈ ಅವಧಿಯಲ್ಲಿ ರಾಜ್ಯ ಕಂಡಿದೆ. ಇದು ವಾಡಿಕೆ ಮಳೆ ಪ್ರಮಾಣಕ್ಕಿಂತ ಶೇ.274ರಷ್ಟುಹೆಚ್ಚಿನ ಪ್ರಮಾಣದ ಮಳೆ. ವಾಡಿಕೆ ಪ್ರಕಾರ ಈ ಅವಧಿಯಲ್ಲಿ 59 ಮಿ.ಮೀ. ಮಳೆಯಾಗುತ್ತದೆ.

ಕಳೆದ 118 ವರ್ಷಗಳಲ್ಲಿ ಅತಿ ಹೆಚ್ಚಿನ ಮಳೆ ಈ ವರ್ಷ ದಾಖಲಾಗಿದ್ದರೆ, ಇದರ ನಂತರದ ಸ್ಥಾನ 13 ವರ್ಷದ ಹಿಂದೆ ಅಂದರೆ 2005ರ ಆ.3ರಿಂದ 10ರ ನಡುವಿನ ಏಳು ದಿನದ ಅವಧಿಯಲ್ಲಿ ಸುರಿದ ಮಳೆ ಪಡೆದುಕೊಂಡಿದೆ. ಆ ವರ್ಷ ರಾಜ್ಯವು 155 ಮಿ.ಮೀ. ಅಂದರೆ, ವಾಡಿಕೆಗಿಂತ ಶೇ.165ರಷ್ಟುಹೆಚ್ಚು ಮಳೆ ಪಡೆದಿತ್ತು. ಇದು ಈ ವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಪ್ರಸಕ್ತ ವರ್ಷದ ಮಳೆ ಮುರಿದಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

7 ಜಿಲ್ಲೆಗಳಲ್ಲಿ ದಾಖಲೆ ಮಳೆ:

ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನದಲ್ಲಿ ಆ.3 ರಿಂದ ಆ.10ರ ಅವಧಿಯಲ್ಲಿ ಸುರಿದ ಮಳೆ ಆ ಜಿಲ್ಲೆಗಳ ಸಾರ್ವಕಾಲಿಕ ದಾಖಲೆಯ ಮಳೆಯೂ ಆಗಿದೆ. ಇತಿಹಾಸದಲ್ಲಿ ಈ ಏಳು ಜಿಲ್ಲೆಗಳಲ್ಲಿ ಆ.3ರಿಂದ 10ರ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಮಳೆ ಆಗಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ.3ರಿಂದ ಆ.10ವರೆಗೆ ಸುರಿದ ಮಳೆ ವಿವರ ( ಮಿ.ಮೀ.)

ಇಂದು ಮುಖ್ಯಮಂತ್ರಿಗೆ ವರದಿ ಸಲ್ಲಿಕೆ

ಇಡೀ ರಾಜ್ಯ ತತ್ತರಿಸುವಂತೆ ಸುರಿದ ಮಳೆಯ ಬಗ್ಗೆ ಹಾಗೂ ಪ್ರವಾಹ ಮತ್ತು ಮಳೆಹಾನಿಗೆ ತುತ್ತಾದ ಜಿಲ್ಲೆಯಲ್ಲಿ ಎಷ್ಟುಪ್ರಮಾಣದ ಮಳೆಯಾಗಿದೆ ಎಂಬುದರ ವಿವರದ ವರದಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ಸಿದ್ಧಪಡಿಸಿದ್ದು, ಆ.14ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಲ್ಲಿಕೆ ಮಾಡಲಿದ್ದಾರೆ.