ಬೆಂಗಳೂರು[ಆ.14]: ಕಳೆದೆರಡು ವಾರದಿಂದ ರಾಜ್ಯವನ್ನು ಆವರಿಸಿದ್ದ ಮಳೆ, ಪ್ರವಾಹದಬ್ಬರ ಬಹುತೇಕ ಮಂಗಳವಾರ ಕ್ಷೀಣಗೊಂಡಿದ್ದು, ಸಂತ್ರಸ್ತರ ರಕ್ಷಣಾ ಕಾರ್ಯವನ್ನು ಸೇನೆ ಬಹುತೇಕ ಸ್ಥಗಿತಗೊಳಿಸಿದೆ. ಈಗಾಗಲೇ ರಾಜ್ಯಾದ್ಯಂತ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ, ಸ್ಥಳಾಂತರಿಸುವ ಕಾರ್ಯವನ್ನು ಭಾರತೀಯ ಸೇನೆಯ ಮೂರೂ ಪಡೆಗಳು ಮಾಡಿವೆ. ಸದ್ಯ ರಾಜ್ಯದಲ್ಲಿ ಮಳೆ, ನೆರೆ ಪರಿಸ್ಥಿತಿ ಸುಧಾರಿಸಿರುವುದರಿಂದ ಯೋಧರು ತಮ್ಮ ಶಿಬಿರಗಳಿಗೆ ವಾಪಸಾಗುತ್ತಿದ್ದು, ಈ ಯೋಧರಿಗೆ ಸಂತ್ರಸ್ತ ಮಹಿಳೆಯರು ರಾಖಿ ಕಟ್ಟುವ ಮೂಲಕ ಭಾವಪೂರ್ಣ ಕೃತಜ್ಞತೆ ಸಲ್ಲಿಸಿದ್ದಾರೆ. ವೀರಯೋಧರೇ ‘ನಿಮಗಿದೋ ಸಲಾಂ’ ಎಂದು ಹೇಳಿದ್ದಾರೆ.

ವಾಯುಸೇನೆಯಿಂದ 553 ಮಂದಿ: ಭಾರತೀಯ ವಾಯುಸೇನೆಯು ಹೆಲಿಕಾಪ್ಟರ್‌ ಕಾರ್ಯಾಚರಣೆ ನಡೆಸಿ ರಾಜ್ಯದ ವಿವಿಧೆಡೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 553 ಮಂದಿಯನ್ನು ರಕ್ಷಿಸಿದೆ ಎಂದು ಏರ್‌ ಮಾರ್ಷಲ್‌ ಎಸ್‌.ಕೆ.ಘೋಟಿಯಾ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಬೆಳಗಾವಿ, ಕೊಪ್ಪಳ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಸೇರಿ ಉಳಿದೆಡೆ ನೌಕಾಪಡೆ ಮತ್ತು ಸೇನಾಪಡೆ 4000ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದೆ, ಸುರಕ್ಷಿತ ಪ್ರದೇಶಕ್ಕೆ ರವಾನಿಸಿದೆ. ನೂರಾರು ಟನ್‌ ಆಹಾರವನ್ನು ಸಂತ್ರಸ್ತರಿಗೆ ರವಾನಿಸಿದೆ.

ಸುಲಭವಾಗಿರಲಿಲಿಲ್ಲ ರಕ್ಷಣಾ ಕಾರ್ಯ: ಕಳೆದೆರಡು ವಾರದಿಂದ ಪ್ರವಾಹದಿಂದ ನೀರುಪಾಲಾಗುತ್ತಿದ್ದ, ಗುಡ್ಡಕುಸಿದು ಸರ್ವಸ್ವವನ್ನೂ ಕಳೆದುಕೊಂಡು ಬದುಕಿನ ಆಸೆಯನ್ನೇ ಕಳೆದುಕೊಂಡಿದ್ದವರನ್ನು ರಕ್ಷಿಸುವ, ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯ ಸುಲಭವೇನೂ ಆಗಿರಲಿಲ್ಲ. ಇಂತಿಂಥ ಸ್ಥಳದಲ್ಲಿ ಜನ ಸಂಕಷ್ಟದಲ್ಲಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದಾಗ ತಕ್ಷಣ ಹೆಲಿಕಾಪ್ಟರ್‌, ಬೋಟ್‌ ಹಿಡಿದುಕೊಂಡು ಧಾವಿಸಿದ ಯೋಧರು, ಕೆಲವೆಡೆ ಹತ್ತಾರು ಕಿ.ಮೀ. ನಡೆದುಕೊಂಡು, ಪ್ರತಿಕೂಲ ಹವಾಮಾನದಲ್ಲೂ ಜೀವದ ಹಂಗು ತೊರೆದು ಗುಡ್ಡಗಾಡು, ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದವರನ್ನು ರಕ್ಷಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ರಕ್ಷಣಾ ಕಾರ್ಯಾಚರಣೆಯಂತು ಯೋಧರಿಗೆ ಭಾರೀ ಸವಾಲಾಗಿತ್ತು. 19 ವರ್ಷದ ವೃತ್ತಿ ಜೀವನದಲ್ಲಿ ಬಿಹಾರ ಸೇರಿದಂತೆ ಹಲವೆಡೆ ನೆರೆ ಸಂತ್ರಸ್ತರ ರಕ್ಷಣೆಗೆ ಹೋಗಿದ್ದೇನೆ. ಈ ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಕಾರ್ಯಾಚರಣೆಯಲ್ಲಿ ಆದ ಅನುಭವ ಮಾತ್ರ ‘ಹಾರಿಬಲ್‌’ ಎಂದು ಹೇಳಿದ್ದಾರೆ ಲ್ಯಾನ್ಸ್‌ ನಾಯಕ್‌ ಎಂ.ಮಲಕಪ್ಪ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್‌ ಹೊರಟ್ಟಿ, ದುರ್ಗದಹಳ್ಳಿ ಗ್ರಾಮಗಳಲ್ಲಿ 76ಕ್ಕೂ ಹೆಚ್ಚು ಮಂದಿಯನ್ನು ಮಲಕಪ್ಪ ಅವರಿದ್ದ ತಂಡ, 8 ಕಿ.ಮೀ. ನಡೆದುಕೊಂಡು ಹೋಗಿ, ಇಳಿಜಾರು ಬೆಟ್ಟದಲ್ಲಿ ಸಾಗಿ ಗುಡ್ಡಕುಸಿತದಲ್ಲಿ ಸಿಲುಕಿದ್ದವರನ್ನು ಮಲಕಪ್ಪ ಅವರಿದ್ದ ತಂಡ ರಕ್ಷಿಸಿತ್ತು. ಅವರಲ್ಲಿ ಅನ್ನ, ಆಹಾರವಿಲ್ಲದೆ ತೀರಾ ನಿತ್ರಾಣವಾಗಿದ್ದವರನ್ನು ಕಡಿದಾದ ಮಾರ್ಗದಲ್ಲಿ ಸ್ಟ್ರೆಚರ್ ಮೇಲೆ ಹೊತ್ತುಕೊಂಡೇ ಸುರಕ್ಷಿತವಾಗಿ ವಾಪಸ್‌ ಕರೆದುಕೊಂಡು ಬಂದಿತ್ತು.

ಇನ್ನು ವಾಯುಸೇನೆಯ ಕರ್ನಲ್‌ ಸಚಿನ್‌ ಜೈನ್‌ ಅವರ ತಂಡವಂತೂ ರಕ್ಷಣಾ ಕಾರ್ಯದ ವೇಳೆ ತಾವೇ ಪ್ರವಾಹಕ್ಕೆ ಸಿಲುಕಿ 16 ಗಂಟೆ ಮನೆ ಮೇಲೆ ಕಾಯಬೇಕಾಗಿ ಬಂದ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಬಾಗಲಕೋಟೆಯ ಮುಧೋಳ ತಾಲೂಕಿನ ರೂಗಿ ಗ್ರಾಮದ ಸಂತ್ರಸ್ತರ ರಕ್ಷಣೆಗೆ ತೆರಳಿದಾಗ 7 ಮಂದಿ ಯೋಧರ ಬೋಟ್‌ ಪ್ರವಾಹಕ್ಕೆ ಸಿಲುಕಿತ್ತು. ಈ ವೇಲೆ ರಕ್ಷಣೆಗೆ ಹೋದ ತಂಡವೇ ಗ್ರಾಮದ ಮನೆಯೊಂದರ ಮೇಲೆ ಸಿಕ್ಕಿಹಾಕಿಕೊಂಡಿತ್ತು, 16 ಗಂಟೆ ಬಳಿಕ ಕಾಪ್ಟರ್‌ ಮೂಲಕ ತಮ್ಮನ್ನು ರಕ್ಷಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.

ಪಟ್ಟಣದ ಕಲ್ಲಿನಲ್ಲಿ ಸ್ಮಾರಕದ ಮೇಲೆ ಕೂತಿದ್ದವರನ್ನು ರಕ್ಷಿಸುವ ಕಾರ್ಯವಂತು ಸವಾಲಿನದಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಸೇನೆಯು ಬಾಗಲಕೋಟೆ ಭಾಗದಲ್ಲೇ 1600ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿತ್ತು. ಕರಾವಳಿಯಲ್ಲಿ ನೌಕಾ ಸೇನೆಯ ಯೋಧರು ನೆರವಿಗೆ ಧಾವಿಸಿದ್ದರು. 1900 ಮಂದಿಯನ್ನು ಸಂಕಷ್ಟದಿಂದ ಪಾರು ಮಾಡಿದ್ದರು.

ಪಾದಮುಟ್ಟಿನಮಸ್ಕರಿಸಿದರು: ಆಪತ್ತಿನಲ್ಲಿ ನೆರವಿಗೆ ಬಂದ ಯೋಧರಿಗೆ ಎಷ್ಟುಕೃತಜ್ಞತೆ ಹೇಳಿದರೂ ಸಾಲದು. ಇದೇ ಕಾರಣಕ್ಕೆ ಆಪತ್ಬಾಂಧವರಾಗಿ ಬಂದ ಯೋಧರಿಗ ಸಂತ್ರಸ್ತ ಹೆಣ್ಣುಮಕ್ಕಳು ವಿಶೇಷ ಗೌರವ ಸಲ್ಲಿಸಿದ್ದಾರೆ. ರಕ್ಷಣಾ ಕಾರ್ಯ ಮುಗಿಸಿ ತಮ್ಮ ಶಿಬಿರಗಳಿಗೆ ಮರಳಲು ಸಿದ್ಧವಾಗಿ ನಿಂತ ಯೋಧರಿಗೆ ಮಹಿಳೆಯರು, ಮಹಿಳಾ ಅಧಿಕಾರಿಗಳು ರಾಖಿ ಕಟ್ಟಿ ಬೀಳ್ಕೊಟ್ಟಿದ್ದಾರೆ.

ಚಿಕ್ಕಮಗಳೂರಿನ ಆಲೇಖಾನ್‌-ಹೊರಟ್ಟಿಮಹಿಳೆಯರು, ಮಹಿಳಾ ಸಿಬ್ಬಂದಿ ರಾಖಿ ಕಟ್ಟಿಶುಭ ಕೋರಿದರೆ, ಚಿಕ್ಕೋಡಿಯಲ್ಲಿ ಸಂತ್ರಸ್ತ ಮಹಿಳೆಯರು 12 ದಿನಗಳಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಯೋಧರಿಗೆ ರಾಖಿ ಕಟ್ಟಿಪಾದಮುಟ್ಟಿನಮಸ್ಕರಿಸಿದರು. ಇನ್ನು ಬಾಗಲಕೋಟೆಯಲ್ಲಿ ಮಹಿಳಾ ಸಿಬ್ಬಂದಿ ರಾಖಿಕಟ್ಟಿ, ಗೌರವಿಸಿ ಬೀಳ್ಕೊಟ್ಟರು. ಈ ವಿಶೇಷ ಪ್ರೀತಿಯನ್ನು ಕಂಡು ಯೋಧರ ಕಣ್ಣಲ್ಲೂ ಒಂದರೆಕ್ಷಣ ಜಿನುಗಿತು.