Asianet Suvarna News Asianet Suvarna News

ಭಾರತದಲ್ಲಿ ಅನಾಹುತ ಸೃಷ್ಟಿಸುತ್ತಿದೆ ಧೂಳಿನ ಬಿರುಗಾಳಿ : 106 ಸಾವು

ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ರಾತ್ರೋರಾತ್ರಿ ದಿಢೀರನೆ ಎದ್ದ ಧೂಳಿನ ಬಿರುಗಾಳಿಗೆ 106 ಮಂದಿ ಸಾವನ್ನಪ್ಪಿ, 200 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಧೂಳಿನಚಕ್ರವಾತದ ನಂತರ ಸುರಿದ ಭಾರಿ ಗುಡುಗು 
ಮಳೆಯಿಂದ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ. 

Rain and dust storms lash Uttar Pradesh, Rajasthan

ಲಖನೌ/ ಜೈಪುರ: ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ರಾತ್ರೋರಾತ್ರಿ ದಿಢೀರನೆ ಎದ್ದ ಧೂಳಿನ ಬಿರುಗಾಳಿಗೆ 106 ಮಂದಿ ಸಾವನ್ನಪ್ಪಿ, 200 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಧೂಳಿನಚಕ್ರವಾತದ ನಂತರ ಸುರಿದ ಭಾರಿ ಗುಡುಗು ಮಳೆಯಿಂದ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಬುಧವಾರ ತಡರಾತ್ರಿಯ ನಂತರ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಹಾಗೂ ರಾಜಸ್ಥಾನದ 3 ಜಿಲ್ಲೆಗಳಲ್ಲಿ ದಿಢೀರನೆ 100 ಕಿ.ಮೀ ವೇಗದಲ್ಲಿ ಧೂಳಿನ ಚಕ್ರವಾತ ಎದ್ದಿದೆ. ಈ ಗಾಳಿ ರಾತ್ರಿಯುದ್ದಕ್ಕೂ ಬೀಸಿದ್ದು, ನಂತರ ಬೆಳಗಿನ ಜಾವದಲ್ಲಿ ಭಾರಿ ಗುಡುಗು ಮಳೆ ಸುರಿದಿದೆ. 

ಧೂಳುಗಾಳಿ ಹಾಗೂ ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ 70 ಮಂದಿ ಹಾಗೂ ರಾಜಸ್ಥಾನದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರ ಸಂಖ್ಯೆ ಉತ್ತರ ಪ್ರದೇಶದಲ್ಲಿ 47 ಹಾಗೂ ರಾಜಸ್ಥಾನದಲ್ಲಿ 100 ಕ್ಕೂ ಹೆಚ್ಚು ಎಂದು ಹೇಳಲಾಗಿದೆ. ಸುಮಾರು 45 ನಿಮಿಷಗಳ ಕಾಲ ಬೀಸಿದ ಬಿರುಗಾಳಿಗೆ ಮನೆಗಳು ಉರುಳಿಬಿದ್ದಿವೆ. ಮರಗಳೆಲ್ಲಾ ನೆಲಕ್ಕರುಳಿವೆ. 

ಭಾರೀ ಪ್ರಮಾಣದಲ್ಲಿ ಫಸಲು ನೆಲಕಚ್ಚಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿರುವಾಗ ಈ ಅವಘಡ ಸಂಭವಿಸಿದೆ. ರಾಜ್ಯದಲ್ಲಿ ಅಪಾರ ಸಾವುನೋವು ಸಂಭವಿಸಿದ್ದರೂ ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. 

ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ರಾಜ್ಯಗಳಲ್ಲಿ ಸಂಭವಿಸಿದ ಧೂಳಿನ ಬಿರುಗಾಳಿ ಹಾಗೂ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದಿಂದ ಎರಡೂ ರಾಜ್ಯಗಳಿಗೆ ಅಗತ್ಯವಿರುವ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದಲ್ಲಿರುವ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾದರೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios