ಹಂಪಿಯಿಂದ ರಾಹುಲ್ ಗಾಂಧಿ ರಾಜ್ಯ ಪ್ರವಾಸ

news | Wednesday, January 24th, 2018
Suvarna Web Desk
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಮೊದಲು ಭೇಟಿ ನೀಡುವ ಧಾರ್ಮಿಕ ತಾಣ ಶೃಂಗೇರಿಯಲ್ಲ, ಬದಲಾಗಿ ಹಂಪಿ. ಅಷ್ಟೇ ಅಲ್ಲ, ರಾಜ್ಯ ಪ್ರವಾಸದ ಮಾರ್ಗದಲ್ಲಿ ಬರುವ ಕೊಪ್ಪಳದ ಗವಿಸಿದ್ದೇಶ್ವರ ಹಾಗೂ ಕನಕಗಿರಿಯ ಕನಕಾಚಲಪತಿ ದೇವಾಲಯಕ್ಕೂ ಅವರು ಭೇಟಿ ನೀಡುವ ಸಾಧ್ಯತೆಯಿದೆ.

ಬೆಂಗಳೂರು(ಜ.24): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಮೊದಲು ಭೇಟಿ ನೀಡುವ ಧಾರ್ಮಿಕ ತಾಣ ಶೃಂಗೇರಿಯಲ್ಲ, ಬದಲಾಗಿ ಹಂಪಿ. ಅಷ್ಟೇ ಅಲ್ಲ, ರಾಜ್ಯ ಪ್ರವಾಸದ ಮಾರ್ಗದಲ್ಲಿ ಬರುವ ಕೊಪ್ಪಳದ ಗವಿಸಿದ್ದೇಶ್ವರ ಹಾಗೂ ಕನಕಗಿರಿಯ ಕನಕಾಚಲಪತಿ ದೇವಾಲಯಕ್ಕೂ ಅವರು ಭೇಟಿ ನೀಡುವ ಸಾಧ್ಯತೆಯಿದೆ.

ಫೆ.10ರಂದು ರಾಜ್ಯ ಪ್ರವಾಸಕ್ಕೆ ಆಗಮಿಸಲಿರುವ ಅವರು ಹೊಸಪೇಟೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಅವರನ್ನು ಹಂಪಿಗೆ ಕರೆದೊಯ್ಯುವ ಪ್ರಸ್ತಾವನೆಯನ್ನು ಕೆಪಿಸಿಸಿ ಹೈಕಮಾಂಡ್‌ಗೆ ನೀಡಿದೆ. ರಾಹುಲ್ ಪ್ರವಾಸದ ಮಾರ್ಗವನ್ನು ಅಂತಿಮಗೊಳಿಸಲು ಜ.25ಕ್ಕೆ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಆಪ್ತ ಬೈಜು, ಅಲಂಕಾರ್ ಹಾಗೂ ಸಚಿನ್‌ರಾವ್ ನೇತೃತ್ವದ ತಂಡ ಖುದ್ದು ರಸ್ತೆ ಮೂಲಕ ಈ ಮಾರ್ಗದಲ್ಲಿ ಸಂಚರಿಸಲಿದೆ. ಇದಾದ ನಂತರವೇ ರಾಹುಲ್ ಎಲ್ಲೆಲ್ಲಿ ಸಂವಾದ, ಪಾದಯಾತ್ರೆ ಹಾಗೂ ಸಮಾವೇಶಗಳನ್ನು ಕೈಗೊಳ್ಳಲಿದ್ದಾರೆ ಎಂಬುದು ಅಂತಿಮಗೊಳ್ಳಲಿದೆ.

ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಹೈದರಾಬಾದ್ ಕರ್ನಾಟಕದ ಮುಖಂಡರ ಸಭೆಯಲ್ಲಿ ರಾಹುಲ್ ಗಾಂಧಿ ಅವರ ಪ್ರವಾಸದಲ್ಲಿ ಸಂಚರಿಸಬಹುದಾದ ಎರಡು ಮಾರ್ಗಗಳನ್ನು ಪ್ರಸ್ತಾಪಿಸಲು ನಿರ್ಧರಿಸಲಾಯಿತು. ಕೊಪ್ಪಳದಿಂದ ಆರಂಭಗೊಳ್ಳುವ ಒಂದು ಮಾರ್ಗ ಯಾದಗಿರಿಯಲ್ಲಿ ಅಂತ್ಯಗೊಂಡರೆ, ಮತ್ತೊಂದು ಮಾರ್ಗ ಕೊಪ್ಪಳದಿಂದ ಆರಂಭಗೊಂಡು ವಿಜಯಪುರದಲ್ಲಿ ಅಂತಿಮಗೊಳ್ಳುತ್ತದೆ.

ಈ ಎರಡು ಮಾರ್ಗದಲ್ಲಿ ಯಾವುದರಲ್ಲಿ ಸಂಚರಿಸಬೇಕು ಎಂಬುದನ್ನು ರಾಹುಲ್ ತಂಡ ನಿರ್ಧರಿಸಲಿದೆ. ಕೆಪಿಸಿಸಿ ನೀಡಿರುವ ಮಾರ್ಗದ ಪ್ರಕಾರ ಬಳ್ಳಾರಿ ಜಿಲ್ಲೆಯ ತೋರಣಗಲ್‌ಗೆ ಫೆ.೧೦ರಂದು ಹೆಲಿಕಾಪ್ಟರ್ ನಲ್ಲಿ ಅಗಮಿಸುವ ರಾಹುಲ್ ಗಾಂಧಿ ಅಂದು ಹೊಸಪೇಟೆಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಈ ಸಮಾವೇಶ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಊಟದ ನಂತರ ರಸ್ತೆ ಮಾರ್ಗದಲ್ಲಿ ಹಂಪಿಗೆ ರಾಹುಲ್‌ಗಾಂಧಿ ಅವರನ್ನು ಕರೆದೊಯ್ಯುವ ಯೋಜನೆ ಕೆಪಿಸಿಸಿಯದ್ದು. ಇದಾದ ನಂತರ ರಾಹುಲ್ ಗಾಂಧಿ ಕೊಪ್ಪಳದಲ್ಲೇ ತಂಗುವರು.

ಫೆ.11ರಂದು ಬಸ್‌ನಲ್ಲಿ ಸಂಚಾರ ಆರಂಭಿಸುವ ರಾಹುಲ್ ಗಾಂಧಿ, ಕೊಪ್ಪಳ, ಯಲಬುರ್ಗಾ, ಕನಕಗಿರಿ, ಕಾರಟಗಿ ಮತ್ತು ಸಿಂಧನೂರುವರೆಗೂ ಸಂಚರಿಸುವರು. ಅಂದು ಸಿಂಧನೂರಿನಲ್ಲಿ ಅವರು ತಂಗಲಿದ್ದಾರೆ. ಈ ಮಾರ್ಗದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠ ಹಾಗೂ ಕನಕಗಿರಿಯ ಕನಕಾಚಲಪತಿ ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಫೆ.11ರಂದು ಸಿಂಧನೂರಿನಲ್ಲಿ ಅವರು ತಂಗಲಿದ್ದಾರೆ.

ಕೊಪ್ಪಳದಿಂದ ಸಿಂಧನೂರುವರೆಗಿನ ಮಾರ್ಗದ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ, ಸಿಂಧನೂರಿನಿಂದ ಮಾನ್ವಿ, ರಾಯಚೂರು, ಶಕ್ತಿನಗರ, ಸೈದಾಪುರ ಮೂಲಕ ಯಾದಗಿರಿಗೆ ಹೋಗಬೇಕೋ ಅಥವಾ ಸಿಂಧನೂರು, ಲಿಂಗಸುಗೂರು, ಸುರಪುರ, ಶಹಾಪುರ, ಜೇವರ್ಗಿ ಮೂಲಕ ವಿಜಯಪುರ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಬಗ್ಗೆ ಗೊಂದಲವಿದೆ. ಕೆಪಿಸಿಸಿ ಈ ಎರಡು ಮಾರ್ಗವನ್ನು ಹೈಕಮಾಂಡ್‌ಗೆ ನೀಡಲಿದೆ. ಅಂತಿಮವಾಗಿ ಮಾರ್ಗವನ್ನು ಹೈಕಮಾಂಡ್ ನಿರ್ಧರಿಸಲಿದೆ.

ರಾಹುಲ್ ಗಾಂಧಿ ಅವರು ಕೈಗೊಳ್ಳಲಿರುವ ಈ ಬಸ್ ಯಾತ್ರೆಯ ವೇಳೆ ಮಾರ್ಗ ಮಧ್ಯದಲ್ಲಿ ರೈತರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ಪಾದಯಾತ್ರೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಈ ಬಸ್ ಯಾತ್ರೆ ವೇಳೆ ರಾಹುಲ್ ಅವರ ಬಸ್ ನಲ್ಲಿ ಪ್ರವಾಸ ಮಾಡಲು ಎಲ್ಲರಿಗೂ ಅವಕಾಶವಿರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಯಾವ ಜಿಲ್ಲೆಯ ಪ್ರವಾಸದಲ್ಲಿ ರಾಹುಲ್ ಇರುತ್ತಾರೋ ಆ ಜಿಲ್ಲೆಯ ಮುಖಂಡರಿಗೆ ಮಾತ್ರ ಅವಕಾಶವಿದೆ.

ಮುಂಬೈ-ಕರ್ನಾಟಕ ಪ್ರವಾಸ: ಹೈ-ಕ ಪ್ರವಾಸದ ನಂತರ ರಾಹುಲ್ ಫೆಬ್ರವರಿ ಮಾಸದಲ್ಲೇ ಮುಂಬೈ ಕರ್ನಾಟಕ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕೂಡಲಸಂಗಮಕ್ಕೂ ಭೇಟಿ ನೀಡಲಿದ್ದಾರೆ. ಮುಂಬೈ ಕರ್ನಾಟಕದ ಮೂರು ದಿನಗಳ ಪ್ರವಾಸ ಫೆ.21ರಿಂದ ಆರಂಭಗೊಳ್ಳಲಿದೆ ಎನ್ನಲಾಗಿದ್ದರೂ, ಉನ್ನತ ಮೂಲಗಳು ಇನ್ನೂ ದಿನಾಂಕ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸುತ್ತವೆ.

Comments 0
Add Comment