‘ರಾಹುಲ್ ನೂತನ ಕಾಂಗ್ರೆಸ್ ಅಧ್ಯಕ್ಷ’ ಎಂಬ ಸರ್ಟಿಫಿಕೇಟನ್ನು ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಡಿ.16ರಂದು ನೀಡಲಾಗುತ್ತದೆ’ ಎಂದು ಮುಲ್ಲಪಳ್ಳಿ ತಿಳಿಸಿದ್ದಾರೆ.

ನವದೆಹಲಿ(ಡಿ.11): ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಡಿ.16ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ನಾಮಪತ್ರ ವಾಪಸು ಪಡೆವ ಕೊನೆಯ ದಿನಾಂಕವಾಗಿದೆ.

ಈಗಾಗಲೇ ರಾಹುಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರ ಸ್ವೀಕಾರವಾಗಿದೆ. ನಾಮಪತ್ರ ವಾಪಸು ಎಂಬ ಔಪಚಾರಿಕ ಪ್ರಕ್ರಿಯೆ ಇಂದು ಮುಗಿಯಲಿದ್ದು, ಇದು ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರ ಆಯ್ಕೆ ಘೋಷಣೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.

‘ರಾಹುಲ್ ನೂತನ ಕಾಂಗ್ರೆಸ್ ಅಧ್ಯಕ್ಷ’ ಎಂಬ ಸರ್ಟಿಫಿಕೇಟನ್ನು ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಡಿ.16ರಂದು ನೀಡಲಾಗುತ್ತದೆ’ ಎಂದು ಮುಲ್ಲಪಳ್ಳಿ ತಿಳಿಸಿದ್ದಾರೆ. ಡಿ.16ರಂದು ಬೆಳಗ್ಗೆ 11ಕ್ಕೆ ಸರ್ಟಿಫಿಕೇಟ್ ಪ್ರದಾನ ಸಮಯ ನಿಗದಿಯಾಗಿದೆ. ಇದಾದ ಬಳಿಕ ರಾಹುಲ್ ಅವರು ಎಐಸಿಸಿ ಮುಖ್ಯ ಕಚೇರಿಯಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸುವ ಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.