ಬೆಂಗಳೂರು[ಮೇ.20]: ಲೋಕಸಭೆ ಚುನಾವಣೆಯ ಅಂತಿಮ ಫಲಿತಾಂಶ ಏನೇ ಆಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಬಾಧಿತವಾಗಿ ಮುಂದುವರೆಯಬೇಕು. ಕೇಂದ್ರದಲ್ಲಿ ನೂತನ ಸರ್ಕಾರ ರಚನೆಯಾಗುವ ಸೂಕ್ಷ್ಮ ಕಾಲಘಟ್ಟದಲ್ಲಿ ಯುಪಿಎ ಮೈತ್ರಿಕೂಟದ ಪಕ್ಷಗಳಿಗೆ ತಪ್ಪು ಸಂದೇಶ ರವಾನಿಸುವ ಹೇಳಿಕೆಗಳು ರಾಜ್ಯ ಕಾಂಗ್ರೆಸ್‌ನಿಂದ ಹೊರಬೀಳಬಾರದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತಾಕೀತು ಮಾಡಿದ್ದಾರೆ.

ಇದೇ ವೇಳೆ ಪಕ್ಷದ ಆದೇಶ ಉಲ್ಲಂಘಿಸಿ ಸಮ್ಮಿಶ್ರ ಸರ್ಕಾರ ಅಥವಾ ಮಿತ್ರಪಕ್ಷಗಳ ವಿರುದ್ಧ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದೂ ತಿಳಿದು ಬಂದಿದೆ.

ಭಾನುವಾರ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ಸಿನ ಹಿರಿಯ ನಾಯಕರೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ ಬೆಳವಣಿಗೆಗಳ ಬಗ್ಗೆ ರಾಹುಲ್‌ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ನೂತನ ಸರ್ಕಾರ ರಚನೆಯಾಗುವ ಸೂಕ್ಷ್ಮ ಕಾಲಘಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಮೈತ್ರಿಕೂಟಕ್ಕೆ ಧಕ್ಕೆ ಉಂಟು ಮಾಡುವ ಹಾಗೂ ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಸಮಸ್ಯೆಯಾಗುವಂತಹ ಹೇಳಿಕೆಯನ್ನು ಕೆಲವರು ನೀಡುತ್ತಿದ್ದಾರೆ. ಇದು ಸರಿಯಲ್ಲ. ಕೇಂದ್ರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಮುಗಿಯುವವರೆಗೂ ಸಂಯಮ ಕಾಯ್ದುಕೊಳ್ಳಬೇಕು. ಕಾಂಗ್ರೆಸ್‌ ನಾಯಕರು ಮಿತ್ರಪಕ್ಷಗಳ ಬಗ್ಗೆ ಯಾವುದೇ ಬಹಿರಂಗ ಹೇಳಿಕೆಗಳನ್ನೂ ನೀಡಬಾರದು ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಶಾಸಕರು, ಸಚಿವರು ನೀಡುತ್ತಿರುವ ಹೇಳಿಕೆ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯ, ಇದಕ್ಕೆ ಜೆಡಿಎಸ್‌ ನಾಯಕರು ನೀಡುತ್ತಿರುವ ಪ್ರತಿ ಹೇಳಿಕೆಯಿಂದ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಸರ್ಕಾರದ ಅಸ್ತಿತ್ವದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ವಾರ ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದರು.

ಇದರ ಬೆನ್ನಲ್ಲೇ ರಾಜ್ಯ ನಾಯಕರಿಗೆ ಬುಲಾವ್‌ ನೀಡಿ ಭಾನುವಾರ ಸುದೀರ್ಘ ಸಭೆ ನಡೆಸಿದ ರಾಹುಲ್‌ ಗಾಂಧಿ, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಇಮೇಜಿಗೆ ಧಕ್ಕೆ ಆತಂಕ:

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರ ಮಟ್ಟದಲ್ಲಿ ಸರ್ಕಾರ ರಚನೆಗೆ ಜೆಡಿಎಸ್‌ ನೆರವಾಗುತ್ತದೆ ಎಂಬ ಕಾರಣಕ್ಕಾಗಿಯೇ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಲಾಗಿದೆ. ಇದೀಗ ನಿರ್ಣಾಯಕ ಹಂತ ತಲುಪಿರುವ ಸೂಕ್ಷ್ಮ ಕಾಲಘಟ್ಟದಲ್ಲಿ ಅನಗತ್ಯ ವಿವಾದಗಳನ್ನು ಸೃಷ್ಟಿಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದ ಬಗ್ಗೆ ಕೆಟ್ಟಸಂದೇಶ ರವಾನಿಸುತ್ತಿದ್ದೀರಿ. ಮುಖ್ಯಮಂತ್ರಿಗಳ ವಿರುದ್ಧ ಕಾಂಗ್ರೆಸ್‌ ಶಾಸಕರು, ಸಚಿವರು ನೀಡುತ್ತಿರುವ ಹೇಳಿಕೆಗಳಿಂದ ಕಾಂಗ್ರೆಸ್‌ ಮೈತ್ರಿಕೂಟದ ಪಕ್ಷಗಳೊಂದಿಗೆ ಕೆಟ್ಟರೀತಿಯಲ್ಲಿ ನಡೆದುಕೊಳ್ಳುತ್ತದೆ ಎಂದು ಸಂದೇಶ ರವಾನೆಯಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು ಎನ್ನಲಾಗಿದೆ.

ರಾಹುಲ್‌ ಗಾಂಧಿ ಶಿಸ್ತಿನ ಪಾಠ:

ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಈ ಎಲ್ಲಾ ಪ್ರಯತ್ನ ನಡೆಸಿದ್ದೇವೆ. ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಜೆಡಿಎಸ್‌ನ ಬೆಂಬಲ ಪಡೆದರೆ ಕೇಂದ್ರ ಮಟ್ಟದಲ್ಲಿ ಜೆಡಿಎಸ್‌ ನಮ್ಮ ಮಿತ್ರ ಪಕ್ಷವಾಗಲಿದೆ. ಒಂದು ವೇಳೆ ನಮ್ಮ ಲೆಕ್ಕಾಚಾರ ತಲೆಕೆಳಗಾದರೂ, ಲೋಕಸಭೆ ಚುನಾವಣೆ ಫಲಿತಾಂಶ ನಮಗೆ ಪೂರಕವಾಗಿ ಬಂದಿಲ್ಲ ಎಂದರೂ ಮೈತ್ರಿ ಸರ್ಕಾರಕ್ಕೆ ಧಕ್ಕೆ ಉಂಟಾಗಬಾರದು. ಒಂದು ವೇಳೆ ಈ ರೀತಿ ಆದರೆ ನಮ್ಮ ಕೈಯಲ್ಲಿರುವ ಅಧಿಕಾರವನ್ನು ಕೈಯಾರೆ ಕಳೆದುಕೊಂಡಂತಾಗುತ್ತದೆ. ಹೀಗಾಗಿ ಮೈತ್ರಿ ಧರ್ಮದ ವಿರುದ್ಧವಾಗಿ ಯಾರೊಬ್ಬರೂ ಹೇಳಿಕೆ ನೀಡಬಾರದು. ಒಂದು ವೇಳೆ ಅಸಮಾಧಾನಗಳು ಇದ್ದರೆ ಶಾಸಕಾಂಗ ಪಕ್ಷದ ನಾಯಕರ ಮೂಲಕ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ‘ಶಿಸ್ತಿನ ಪಾಠ’ ಮಾಡಿದರು.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಭಾಗಿಯಾಗಿದ್ದರು. ಬೆಳಗ್ಗೆ 11.30ರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿಸ್ತೃತವಾಗಿ ಎಲ್ಲಾ ವಿಷಯದ ಬಗ್ಗೆಯೂ ಚರ್ಚೆಯಾಗಿದೆ.

ಪಕ್ಷದ ಶಿಸ್ತು ಹಾಳಾಗಬಾರದು. ಕಾಂಗ್ರೆಸ್‌ ನಾಯಕರೆಲ್ಲ ಒಟ್ಟಾಗಿ ಹೋಗಬೇಕು. ಬಹಿರಂಗ ಹೇಳಿಕೆಗಳ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಗಾಗಿ ಶಿಸ್ತು ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇನ್ನು ಯಾವುದೇ ನಾಯಕ ಅಂತಹ ಹೇಳಿಕೆ ನೀಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.