ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತಾವು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡ್‌ಗೆ ಜೂ.7, 8ರಂದು ಎರಡು ದಿನಗಳ ಕಾಲ ಭೇಟಿ ನೀಡಲಿದ್ದಾರೆ. ತಮ್ಮನ್ನು ಬೆಂಬಲಿಸಿದ ವಯನಾಡಿನ ಜನರಿಗೆ ಧನ್ಯವಾದ ತಿಳಿಸಲು ರಾಹುಲ್‌ ಆಗಮಿಸುತ್ತಿರುವುದಾಗಿ ಕೇರಳ ಕಾಂಗ್ರೆಸ್‌ ಘಟಕ ತಿಳಿಸಿದೆ.

ಗೆಲುವು ಸಾಧಿಸಿದ ವಯನಾಡಿಗೆ ರಾಗಾ ಅವರ ಮೊದಲ ಅಧಿಕೃತ ಭೇಟಿ ಇದಾಗಿದೆ. ರಾಗಾ ವಯನಾಡಿನ ಜತೆಗೆ ತಮ್ಮ ಪಾರಂಪರಿಕ ಕ್ಷೇತ್ರ ಉತ್ತರ ಪ್ರದೇಶದ ಅಮೇಠಿಯಿಂದಲೂ ಸ್ಪರ್ಧಿಸಿದ್ದರು.

ಆದರೆ ಅಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಎದುರು ಪರಾಭವಗೊಂಡಿದ್ದರು. ವಯನಾಡಿಯಲ್ಲಿ ಸಿಪಿಐನ ಪಿ.ಪಿ. ಸುನೀರ್‌ ವಿರುದ್ಧ ರಾಹುಲ್‌ ಗಾಂಧಿ 3ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಆದರೆ ತಮ್ಮ ಕುಟುಂಬ ಕಳೆದ 38ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಅಮೇಠಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರಿಂದ 50ಸಾವಿರಕ್ಕೂ ಹೆಚ್ಚು ಮತಗಳಿಂದ ಪರಾಭವಗೊಂಡಿದ್ದರು.