ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ರಾಹುಲ್ ಗಾಂಧಿ ಹಿಡಿದಿದ್ದಾರೆ.
ನವದೆಹಲಿ (ಡಿ.16): ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ರಾಹುಲ್ ಗಾಂಧಿ ಹಿಡಿದಿದ್ದಾರೆ.
ಕಾಂಗ್ರೆಸ್'ನಲ್ಲಿ ಇಂದಿನಿಂದ ರಾಹುಲ್ ಗಾಂಧಿ ಶಕೆ ಆರಂಭವಾಗುತ್ತಿದೆ. ನೆಹರು ಗಾಂಧಿ ಕುಟುಂಬದ 5 ನೇ ಕುಡಿಯಾದ ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿ ಎಐಸಿಸಿಯ ನೂತನ ಸಾರಥಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಷ್ಟು ದಿನ ಕೈ ‘ಯುವರಾಜ’ನಾಗಿದ್ದ ರಾಹುಲ್ ಹೆಗಲಿಗೆ ಇಂದಿನಿಂದ ಕಾಂಗ್ರೆಸ್ ಮುನ್ನಡೆಸುವ ಹೊಣೆ ಹಾಗೂ ಹಲವು ಮಹತ್ವದ ಜವಾಬ್ದಾರಿಗಳು ಬೀಳಲಿದೆ. ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಘೋಷಿಸುವ ಸೂಚನೆ ನೀಡಿದ್ದು, ಪಕ್ಷದ ಅಷ್ಟೂ ಜವಾಬ್ದಾರಿ ರಾಹುಲ್ ಹೆಗಲೇರಲಿದೆ.
ರಾಹುಲ್ ಗಾಂಧಿ ಮೂಲತಃ ರಾಜಕೀಯ ಕುಟುಂಬದಿಂದ ಬಂದರೂ ಸಹ ರಾಜಕೀಯ ಅವರ ಇಷ್ಟದ ಕ್ಷೇತ್ರವಲ್ಲ. 2004ರಲ್ಲಿ ತಾಯಿ ಸೋನಿಯಾ ಒತ್ತಡಕ್ಕೆ ಮಣಿದ ರಾಹುಲ್, ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆ ಸದಸ್ಯರಾದ್ರು. ಅಂದಿನಿಂದ ರಾಜಕೀಯ ಕ್ಷೇತ್ರ ಅವರನ್ನು ಪೂರ್ಣ ಪ್ರಮಾಣದಲ್ಲಿ ಸೆಳೆಯಿತು. ಆದ್ರೆ ತಾಯಿಯ ನೆರಳಿನಲ್ಲಿ ರಾಜಕೀಯ ಮಾಡಬೇಕಾದ ಅನಿವಾರ್ಯತೆಯಿಂದ, ಹಾಗೂ ಕೆಲ ದುಡುಕಿನ ಮಾತುಗಳಿಂದ ರಾಹುಲ್ ‘ಅಪ್ರಬುದ್ಧ’ ಎಂಬ ಟೀಕೆಗಳಿಗೆ ಗುರಿಯಾಗುತ್ತಾ ಬಂದಿದ್ದಾರೆ.
ರಾಹುಲ್ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಹತ್ಯೆಯನ್ನು ಕಂಡ ನತದೃಷ್ಟ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಹ ಸುಖದ ಸುಪ್ಪತ್ತಿಗೆಯಲ್ಲೇನೂ ಬೆಳೆದವರಲ್ಲ. ಐಷಾರಾಮಗಳ ವ್ಯವಸ್ಥೆ ಇದ್ದರೂ, ಅಜ್ಜಿ ಹಾಗೂ ತಂದೆ ಹತ್ಯೆಯ ಕರಿನೆರಳು ರಾಹುಲ್ ಮೇಲೂ ಬೀಳುವ ಸಂಭವ ಇದ್ದಿದ್ದರಿಂದ, ಈತನಿಗೆ ಭದ್ರತೆಯ ಕಾರಣಕ್ಕೆ ಹಲವು ವರ್ಷಗಳ ಕಾಲ ಮನೆಯಲ್ಲೇ ಶಿಕ್ಷಣ ಕೊಡಿಸಲಾಯಿತು. ಬಳಿಕ ಅತ್ಯುನ್ನತೆಯ ಭದ್ರತೆಯಿಂದ ರಾಹುಲ್ ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆದುಕೊಂಡರು.
2004ರಲ್ಲಿ ರಾಜಕೀಯ ಪ್ರವೇಶಿಸಿದ ರಾಹುಲ್, 2007ರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ರು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆ ದಿಢೀರ್ ಏರಿಕೆ ಕಂಡಿತು. ಲೋಕಸಭೆಯಲ್ಲಿ ಮೌನಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದ ರಾಗಾ ಒಂದು ಬಾರಿ ಮಹಾರಾಷ್ಟ್ರದ ಕಲಾವತಿ ಎಂಬ ಮಹಿಳೆಯ ದಯನೀಯ ಸ್ಥಿತಿ ಬಗ್ಗೆ ದನಿ ಎತ್ತಿದ್ರು. ಒಮ್ಮೆ ಕಳಂಕಿತ ಜನಪ್ರತಿನಿಧಿಗಳ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಸ್ವಪಕ್ಷದವರ ಸುದ್ದಿಗೋಷ್ಟಿ ಪತ್ರವನ್ನ ಹರಿದು ಹಾಕಿ ಆರ್ಭಟಿಸಿದ್ರು. ಬಳಿಕ 2013 ರಲ್ಲಿ ಎಐಸಿಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಇಂದು ಅಧ್ಯಕ್ಷ ಪಟ್ಟ ವಹಿಸಿಕೊಂಡಿದ್ದಾರೆ.
