ನವದೆಹಲಿ[ಜೂ.27]: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಪಕ್ಷದ ಅಧ್ಯಕ್ಷ ಗಾದಿಗೆ ತಾವು ನೀಡಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ರಾಹುಲ್‌ ಗಾಂಧಿ ಪುನರುಚ್ಚರಿಸಿದ್ದಾರೆ. ಈ ಮೂಲಕ ಹೊಸ ಅಧ್ಯಕ್ಷರ ಆಯ್ಕೆ ಅನಿವಾರ್ಯ ಎಂಬ ಸಂದೇಶ ರವಾನಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ನ ಎಲ್ಲಾ ಸಂಸದರು, ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರದಿಂದ ಹಿಂದಕ್ಕೆ ಸರಿಯುವಂತೆ ರಾಹುಲ್‌ಗೆ ಒಕ್ಕೊರಲ ಮನವಿ ಮಾಡಿದರು. ಜೊತೆಗೆ ಲೋಕಸಭಾ ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ಹೊರಲು ಎಲ್ಲಾ ಸಂಸದರೂ ಸಿದ್ಧರಿದ್ದಾರೆ. ಹೀಗಾಗಿರುವ ರಾಹುಲ್‌ ಏಕಾಂಗಿಯಾಗಿ ತಮ್ಮ ಮೇಲೆ ಹೊಣೆ ಹೊತ್ತುಕೊಳ್ಳುವ ಅಗತ್ಯವಿಲ್ಲ ಎಂದು ಪಕ್ಷದ ಹಿರಿಯ ನಾಯಕರಾದ ಶಶಿ ತರೂರ್‌ ಮತ್ತು ಮನೀಶ್‌ ತಿವಾರಿ ಅವರು ರಾಹುಲ್‌ಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದರು.

ಆದರೆ ಇಂಥದ್ದೊಂದು ಒತ್ತಾಯದ ಹೊರತಾಗಿಯೂ ಸಂಸದರ ಮನವಿಯನ್ನು ರಾಹುಲ್‌ ಸಾರಸಗಟಾಗಿ ತಿರಸ್ಕರಿಸಿದರು. ಜೊತೆಗೆ ಆ ವಿಷಯ ಚರ್ಚಿಸುವ ವೇದಿಕೆ ಇದಲ್ಲ ಎಂದು ವಿಷಯವನ್ನೇ ರಾಹುಲ್‌ ಬದಲಿಸಿದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಬುಧವಾರ ನವದೆಹಲಿಯಲ್ಲಿನ ರಾಹುಲ್‌ ನಿವಾಸದ ಎದುರು ಪ್ರತಿಭಟನೆ ನಡೆಸುವ ಮೂಲಕ ಅಧ್ಯಕ್ಷ ಪದವಿಯಿಂದ ಕೆಳಗಿಳಿಯುವ ನಿರ್ಧಾರ ಬದಲಿಸುವಂತೆ ರಾಹುಲ್‌ಗೆ ಆಗ್ರಹಿಸಿದರು.

ಹಿರಿಯರ ಸಭೆ: ರಾಹುಲ್‌ ರಾಜೀನಾಮೆಯಿಂದ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರ ಗುಂಪೊಂದು ಮಂಗಳವಾರ ಸಂಜೆ ನವದೆಹಲಿಯ ಪಂಜಾಬ್‌ ಭವನದಲ್ಲಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಹುದ್ದೆಯಲ್ಲಿ ಮುಂದುವರೆಯುವಂತೆ ರಾಹುಲ್‌ ಅವರನ್ನು ಒತ್ತಾಯಿಸಲು ಎಐಸಿಸಿ ಕಚೇರಿಯಲ್ಲಿ ಇನ್ನೊಂದು ಸುತ್ತಿನಲ್ಲಿ ದೊಡ್ಡ ಸಭೆ ನಡೆಸಲೂ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 52 ಸ್ಥಾನ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಮೇ 25ರಂದು ನಡೆದ ಸಿಡಬ್ಲುಸಿ ಸಭೆಯಲ್ಲಿ ರಾಹುಲ್‌ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು.