ಮಾನಸ ಸರೋವರ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ! ಯಾತ್ರೆಯ ಫೋಟೋ ಸಾಮಾಜಿಕ ಜಾಯಲತಾಣದಲ್ಲಿ ಶೇರ್! ಮಾನಸ ಸರೋವರ ಕಂಡು ಮೂಕವಿಸ್ಮಿತರಾದ ರಾಹುಲ್ ಗಾಂಧಿ!ದ್ವೇಷಕ್ಕೆ ಇಲ್ಲಿ ಸ್ಥಾನವಿಲ್ಲ ಎಂದು ರಾಹುಲ್ ಟ್ವೀಟ್
ಕಠ್ಮಂಡು(ಸೆ.5): 'ಮಾನಸ ಸರೋವರ ತುಂಬ ಮನೋಹರವಾಗಿದೆ. ಈ ಸ್ಥಳ ಬಹಳ ಶಾಂತವಾಗಿದ್ದು ನೆಮ್ಮದಿಯಿಂದ ಕೂಡಿದೆ.ಇಲ್ಲಿ ನಾವು ಎಲ್ಲವನ್ನೂ ಪಡೆಯುತ್ತೇವೆ, ಏನನ್ನೂ ಕಳೆದುಕೊಳ್ಳುವುದಿಲ್ಲ. ಯಾರಾದರೂ ಇಲ್ಲಿನ ನೀರು ಕುಡಿಯಬಹುದು, ಇಲ್ಲಿ ದ್ವೇಷವಿಲ್ಲ. ಹಾಗಾಗಿಯೇ ಭಾರತೀಯರು ಮಾನಸ ಸರೋವರವನ್ನು ಪವಿತ್ರವೆಂದು ಕರೆಯುತ್ತಾರೆ'. ಇದು ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಉದ್ಘಾರ.

ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ತಮ್ಮ ಪ್ರವಾಸದ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ವೇಳೆ ಅದೃಷ್ಟವಶಾತ್ ವಿಮಾನ ಅಪಘಾತದಿಂದ ಪಾರಾಗಿದ್ದ ರಾಹುಲ್ ತಾವು ಕೈಲಾಸ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ ರಾಹುಲ್ ಕಳೆದ ಅಗಸ್ಟ್ 31 ರಂದು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾರೆ.
ಶಿವನ ಆಶೀರ್ವಾದ ಪಡೆಯುವುದಕ್ಕಾಗಿ ತಾವು 12 ದಿನಗಳ ಕಾಲ ಈ ಯಾತ್ರೆ ಕೈಗೊಂಡಿರುವುದಾಗಿ ರಾಹುಲ್ ತಿಳಿಸಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ರಾಹುಲ್ ಭೇಟಿ ನೀಡುವ ಸ್ಥಳದ ನಕಾಶೆ ಬಹಿರಂಗಪಡಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ.
