ನವದೆಹಲಿ(ಮೇ.02): ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ನಿನ್ನೆ(ಮೇ.01) ನಡೆದ ನಕ್ಸಲರ ಅಟ್ಟಹಾಸವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದಾಳಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ್ ರಾಹುಲ್ ಗಾಂಧಿ, 2014ರ ಬಳಿಕ ದೇಶದಲ್ಲಿ ಸುಮಾರು 942 ಬಾಂಬ್ ದಾಳಿಗಳಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಕಿವಿಗೆ ಕೇಳಿಸುತ್ತಿಲ್ಲ ಎಂದು ರಾಹುಲ್ ಹರಿಹಾಯ್ದಿದ್ದಾರೆ. 

ಪುಲ್ವಾಮಾ, ಪಠಾಣ್‌ಕೋಟ್, ಉರಿ, ದಂತೇವಾಡಾ, ಗಡ್‌ಚಿರೋಲಿ ಸೇರಿದಂತೆ ಇದುವರೆಗೂ ದೇಶದಲ್ಲಿ ಸುಮಾರು 942 ಬಾಂಬ್ ದಾಳಿಗಳು ನಡೆದಿವೆ ಎಂದು ರಾಹುಲ್ ಅಸಮಾಧಾನ ಹೊರ ಹಾಕಿದ್ದಾರೆ.

ವಿವಿಧ ದಾಳಿಗಳಲ್ಲಿ ಹುತಾತ್ಮರಾದ ಸೈನಿಕರ ಮತ್ತು ಪೊಲೀಸರ ಕುಟುಂಬಸ್ಥರ ಆಕ್ರಂದನ ಕೇಳಲು ಪ್ರಧಾನಿ ಮೋದಿ ತಮ್ಮ ಕಿವಿಗಳನ್ನು ತೆರೆದಿಡಬೇಕಾಗಿದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಬಾಂಬ್ ದಾಳಿ ನಡೆದಿಲ್ಲ ಎಂದು ಕಳೆದ ವಾರವಷ್ಟೇ ಪ್ರಧಾನಿ ಮೋದಿ ಹೇಳಿದ್ದರು. ಆದರೆ 2014ರ ಬಳಿಕ ದೇಶದಲ್ಲಿ 942 ಬಾಂಬ್ ದಾಳಿಗಳಾಗಿರುವುದು ಅವರ ಕಿವಿಗೆ ಕೇಳಿಸಿಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ.