ಪಟನಾ[ಮೇ.29]: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಹುಲ್‌ ಗಾಂಧಿ ಅವರ ನಿರ್ಧಾರ ಪಕ್ಷದ ಆತ್ಮಹತ್ಯೆಗೆ ಸಮ. ಜೊತೆಗೆ ಬಿಜೆಪಿಯ ಮುಂದೆ ಮಂಡಿಯೂರಿ ಮಣಿದಂತೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭಾ ಚುನಾವಣೆಯಲ್ಲಾದ ಮುಖಭಂಗದಿಂದ ಸೋಲಿನ ಹೊಣೆಯನ್ನು ಸ್ವತಃ ತಾವೇ ಹೊತ್ತ ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಲಾಲು ಪ್ರಸಾದ್‌, ಇದು ಪಕ್ಷವನ್ನು ಆತ್ಮಹತ್ಯೆಗೆ ತಳ್ಳಿದಂತೆಯೇ ಹೊರತು ಮತ್ತಿನ್ನೇನಲ್ಲ.

ಇದರ ಬದಲಾಗಿ ಸಂಘ ಪರಿಹಾರದ ಸವಾಲನ್ನು ಸಾಮಾಜಿಕ ಹಾಗೂ ರಾಜಕೀಯವಾಗಿ ಎದುರಿಸುವ ದಿಟ್ಟತನ ತೋರಬೇಕು. ಬೇರಿನ್ನಾರೇ ಅಧ್ಯಕ್ಷರಾದರೂ ರಾಹುಲ್‌ ಮತ್ತು ಸೋನಿಯಾ ಅವರ ಮಾರ್ಗದರ್ಶನ ಬೇಕೇಬೇಕು. ಆ ಕಾರಣಕ್ಕಾಗಿ ರಾಹುಲ್‌ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತ ಎಂದು ಟ್ವೀಟ್‌ ಮಾಡಿಸುವ ಮೂಲಕ ತಮ್ಮ ಸಂದೇಶ ರವಾನಿಸಿದ್ದಾರೆ.