ಮಾನಸ ಸರೋವರ ಯಾತ್ರೆಯಿಂದ ಬೇಗನೇ ವಾಪಸ್ಸಾದ ರಾಹುಲ್ ಗಾಂಧಿ | ಭಾರತ್ ಬಂದ್‌ನಲ್ಲಿ ಭಾಗಿ | ಗಾಂಧೀಜಿ ಅವರ ಸಮಾಧಿ ಸ್ಥಳ ರಾಜಘಾಟ್‌ಗೆ ತೆರಳಿ ರಾಹುಲ್, ಕೈಲಾಸ- ಮಾನಸ ಸರೋವರದಿಂದ ತಂದಿದ್ದ ಪವಿತ್ರ ಜಲವನ್ನು ಸಮಾಧಿಗೆ ಅರ್ಪಿಸಿದರು.
ನವದೆಹಲಿ (ಸೆ. 11): ಕರ್ನಾಟಕ ಚುನಾವಣೆ ವೇಳೆ ಹೊತ್ತಿದ್ದ ‘ಹರಕೆ’ಯಂತೆ ಕೈಲಾಸ- ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆ ಮೊಟಕುಗೊಳಿಸಿ ದಿಢೀರನೆ ದೆಹಲಿಗೆ ವಾಪಸ್ ಆಗಿದ್ದಾರೆ. ಇದು ಕಾಂಗ್ರೆಸ್ಸಿಗರ ಅಚ್ಚರಿಗೆ ಕಾರಣವಾಗಿದೆ.
ರಾಹುಲ್ ಅವರು ಯಾತ್ರೆ ಮುಗಿಸಿ ಗುರುವಾರ ಅಥವಾ ಶುಕ್ರವಾರ ದೆಹಲಿಗೆ ಹಿಂತಿರುಗಬಹುದು ಎಂದು ಹೇಳಲಾಗಿತ್ತು. ಆದರೆ ಸೋಮವಾರವೇ ಮರಳಿದ ಅವರು, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಭಾರತ್ ಬಂದ್‌ನಂತಹ ದೊಡ್ಡ ಹೋರಾಟಕ್ಕೆ ಕರೆ ನೀಡಿದ್ದರೂ, ರಾಹುಲ್ ಗಾಂಧಿ ಅವರು ಭಾಗವಹಿಸದೇ ಇದ್ದದ್ದು ಕಾಂಗ್ರೆಸ್ಸಿಗರ ಕಸಿವಿಸಿಗೆ ಕಾರಣವಾಗಿತ್ತು.
ಗಾಂಧಿ ಸಮಾಧಿಗೆ ಪವಿತ್ರ ಜಲ: ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಹಾತ್ಮ ಗಾಂಧೀಜಿ ಅವರ ಸಮಾಧಿ ಸ್ಥಳ ರಾಜಘಾಟ್‌ಗೆ ತೆರಳಿದ ರಾಹುಲ್, ಕೈಲಾಸ- ಮಾನಸ ಸರೋವರದಿಂದ ತಂದಿದ್ದ ಪವಿತ್ರ ಜಲವನ್ನು ಸಮಾಧಿಗೆ ಅರ್ಪಿಸಿದರು.

Last Updated 19, Sep 2018, 9:22 AM IST