ನವದೆಹಲಿ(ಅ.30): ನಾವಿಕನಿಲ್ಲದ ಹಡಗಿನಂತಾಗಿರುವ ಕಾಂಗ್ರೆಸ್‌ ಈಗಲೂ ರಾಹುಲ್ ಗಾಂಧಿ ಅವರತ್ತಲೇ ಆಸೆಗಣ್ಣಿನಿಂದ ನೋಡುತ್ತಿದೆ. ಆದರೆ ಕಾಂಗ್ರೆಸ್ ಮುನ್ನಡೆಸುವ ಮನಸ್ಸಿಲ್ಲದ ರಾಹುಲ್ ಗಾಂಧಿ, ಜವಾಬ್ದಾರಿಗಳಿಂದ ದೂರ ಸರಿಯುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಧ್ಯಾನಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ.

ಹೌದು, ನವೆಂಬರ್ 5ರಿಂದ 15ರ ವರೆಗೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಆದರೆ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕಿದ್ದ ರಾಹುಲ್, ಧ್ಯಾನದ ನೆಪ ಹೇಳಿ ವಿದೇಶಕ್ಕೆ ಹೋಗುತ್ತಿದ್ದಾರೆ.

ಇದೊಳ್ಳೆ ತಲೆನೋವು! ವಿದೇಶಕ್ಕೆ ಹೋದ್ರೂ ರಾಹುಲ್ ಎಸ್‌ಪಿಜಿ ಸಿಬ್ಬಂದಿ ಕರೆದೊಯ್ಯಲ್ಲ!

ವಿಶೇಷವೆಂದರೆ ರಾಹುಲ್ ಗಾಂಧಿ ಭಾಗವಹಿಸಿದ್ದ ಸಭೆಯಲ್ಲಿಯೇ, ಮೋದಿ ಸರ್ಕಾರದ ವಿರುದ್ಧ 10 ದಿನಗಳ ಬೃಹತ್ ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಪ್ರತಿಭಟನೆ ಸಮಯದಲ್ಲೇ ರಾಹುಲ್ ಮತ್ತೆ ವಿದೇಶ ಯಾತ್ರೆ ಹೊರಟಿದ್ದಾರೆ.

ಇತ್ತ ರಾಹುಲ್ ವಿದೇಶ ಯಾತ್ರೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ವಕ್ತಾರ ಸುರ್ಜೆವಾಲ, ಈ ಹಿಂದೆಯೂ ರಾಹುಲ್ ಧ್ಯಾನಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿದ್ದರು ಎಂದು ಸಮಜಾಯಿಷಿ ನೀಡಿದ್ದಾರೆ.

ಆರ್ಥಿಕ ಕುಸಿತದ ವಿರುದ್ಧ ಹಾಗೂ ಮೋದಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಇದರ ಭಾಗವಾಗಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನವೆಂಬರ್ 5ರಿಂದ 15ರ ವರೆಗೆ ದೇಶಾದ್ಯಂತ ಹೋರಾಟ ನಡೆಸಲು ಸಜ್ಜಾಗಿದ್ದಾರೆ.