ಇದೊಳ್ಳೆ ತಲೆನೋವು! ವಿದೇಶಕ್ಕೆ ಹೋದ್ರೂ ರಾಹುಲ್ ಎಸ್‌ಪಿಜಿ ಸಿಬ್ಬಂದಿ ಕರೆದೊಯ್ಯಲ್ಲ!
ಎಸ್‌ಪಿಜಿ ಭದ್ರತೆ ಕಡೆಗಣನೆ | ವಿದೇಶಕ್ಕೆ ಹೋದ್ರೂ ಎಸ್‌ಪಿಜಿ ಸಿಬ್ಬಂದಿ ಕರೆದೊಯ್ಯಲ್ಲ | ಬುಲೆಟ್ ಪ್ರೂಫ್ ವಾಹನ ಬಿಟ್ಟು ಓಡಾಡುವ ಕಾಂಗ್ರೆಸ್ ನಾಯಕ: ಕೇಂದ್ರಕ್ಕೆ ಕಳವಳ
ನವದೆಹಲಿ (ಅ. 21): ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸರ್ಕಾರ ತಮಗೆ ನೀಡಿರುವ ‘ವಿಶೇಷ ರಕ್ಷಣಾ ಪಡೆ’ (ಎಸ್‌ಪಿಜಿ) ಭದ್ರತೆಯನ್ನು ಕಡೆಗಣಿಸಿ, ಕಳೆದ 5 ವರ್ಷದಲ್ಲಿ ಹಲವು ಬಾರಿ ಆ ಭದ್ರತೆ ಪಡೆಯದೇ ಸಂಚ ರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ಸರ್ಕಾರ ಹೊಂದಿರುವ ಅಂಕಿ-ಅಂಶಗಳು ಲಭ್ಯವಾಗಿವೆ. ದಿಲ್ಲಿ ಯಲ್ಲಿ ಅವರು 2015 ರಿಂದ 2019 ರ ಮೇವರೆಗೆ 1892 ಬಾರಿ, ಎಸ್‌ಪಿಜಿ ನೀಡಿದ್ದ ಬುಲೆಟ್ ಪ್ರೂಫ್ ಕಾರು ಬಳಸದೇ ಸಂಚರಿಸಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 1 ಬಾರಿಯಂತೆ ಅವರು ಬುಲೆಟ್ ಪ್ರೂಫ್ ಕಾರು ಬಳಸದೇ ಯಾನ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂದಿದೆ 500 ರೂ ಖೋಟಾನೋಟು! ನಾಗರೀಕರೇ ಹುಷಾರ್
ಇನ್ನು 2019 ರ ಜೂನ್‌ವರೆಗಿನ ಅಂಕಿ-ಆಂಶಗಳ ಪ್ರಕಾರ 243 ಬಾರಿ ಅವರು ದಿಲ್ಲಿ ಹೊರಗಡೆ ಗುಂಡು ನಿರೋಧಕ ಕಾರು ಇಲ್ಲದೇ ಸಂಚರಿಸಿದ್ದಾರೆ. 2005 ರಿಂದ 2014 ರವರೆಗೂ ಅವರು 18 ಬಾರಿ ದೇಶದ ವಿವಿಧೆಡೆ ಬುಲೆಟ್ ಪ್ರೂಫ್ ಕಾರಿನಲ್ಲಿ ಸಂಚರಿಸಿಲ್ಲ. 'ವಿದೇಶದಲ್ಲೂ ಅವರು ಎಸ್‌ಪಿಜಿ ಭದ್ರತೆಯೊಂದಿಗೆ ಸಂಚರಿಸಲು ಹಿಂದೇಟು ಹಾಕುತ್ತಾರೆ. 1991 ರಿಂದ ಅವರು 156 ವಿದೇಶ ಪ್ರವಾಸ ಕೈಗೊಂಡಿದ್ದು, 143 ಬಾರಿ ಎಸ್‌ಪಿಜಿ ಭದ್ರತೆ ಇಲ್ಲದೇ ಸಂಚರಿಸಿದ್ದಾರೆ’ ಎಂದು ಸರ್ಕಾರದ ಮೂಲಗಳು ಹೇಳಿವೆ.
ಎಸ್‌ಪಿಜಿ ಭದ್ರತೆ ಪಡೆದವರು ಆ ಭದ್ರತೆ ಯೊಂದಿಗೆ ಕಡ್ಡಾಯವಾಗಿ ಸಂಚರಿಸಲೇಬೇಕು ಎಂಬ ಬಗ್ಗೆ ಅಧಿಕಾರಿಗಳಲ್ಲೇ ಭಿನ್ನಾಭಿಪ್ರಾಯವಿದೆ. ಕೆಲವು ಅಧಿಕಾರಿಗಳು, ‘ಎಸ್ಪಿಜಿ ಕಾಯ್ದೆಯ ಪ್ರಕಾರ ಎಸ್‌ಪಿಜಿ ಭದ್ರತೆ ಪಡೆದವರು ಭದ್ರತಾ ಶಿಷ್ಟಾಚಾರ ಪಾಲಿಸಲೇಬೇಕು’ ಎಂದು ಹೇಳಿದ್ದಾರೆ. ಆದರೆ, ಇನ್ನು ಕೆಲವು ಅಧಿಕಾರಿಗಳು, ‘ವಿದೇಶಗಳಲ್ಲಿ ಸಂಚರಿಸುವಾಗ ಎಸ್‌ಪಿಜಿ ಭದ್ರತೆ ಪಡೆಯಲೇಬೇಕು ಎಂಬ ನಿಯಮವು ಕಾಯ್ದೆಯಲ್ಲಿಲ್ಲ’ ಎಂದಿದ್ದಾರೆ.
2017 ರಲ್ಲಿ ರಾಹುಲ್ ಅವರು ಗುಜರಾತ್‌ನ ಬನಾಸ್‌ಕಾಂಠಾ ಜಿಲ್ಲೆಯಲ್ಲಿ ಎಸ್‌ಪಿಜಿ ನೀಡಿದ್ದ ಬುಲೆಟ್ ಪ್ರೂಫ್ ಕಾರಿನಲ್ಲಿ ಸಂಚರಿಸುತ್ತಿರಲಿಲ್ಲ. ಈ ವೇಳೆ ಅವರ ಕಾರಿನ ಮೇಲೆ ಕಲ್ಲೆಸೆಯಲಾಗಿತ್ತು. ಆಗ ಲೋಕಸಭೆಗೆ ಉತ್ತರ ನೀಡಿದ್ದ ಅಂದಿನ ಕೇಂದ್ರ ಸಚಿವ ರಾಜನಾಥ ಸಿಂಗ್, ‘2015 ರ ಏಪ್ರಿಲ್‌ನಿಂದ 2017 ರ ಜೂನ್‌ವರೆಗೆ ರಾಹುಲ್ ಅವರು 121 ಯಾತ್ರೆಗಳ ಪೈಕಿ 100 ಯಾತ್ರೆಗಳನ್ನು ಎಸ್‌ಪಿಜಿ ಬುಲೆಟ್ ಪ್ರೂಫ್ ಕಾರು ಬಳಸದೇ ಪೂರೈಸಿದ್ದಾರೆ’ ಎಂದು ಹೇಳಿದ್ದರು.