ನವದೆಹಲಿ[ಜೂ.18]: ಕಾಂಗ್ರೆಸ್‌ನಲ್ಲಿ ರಾಹುಲ್‌ ರಾಜೀನಾಮೆ ನಾ ಕೊಡೆ ನೀ ಬಿಡೆ ಎಂಬಂತೆ ಆಗಿದೆ. ಚುನಾವಣೆ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜೀನಾಮೆ ಘೋಷಿಸಿದ್ದ ರಾಹುಲ್‌ ಇಲ್ಲಿಯವರೆಗೂ ಅದನ್ನು ಹಿಂತೆಗೆದುಕೊಂಡಿಲ್ಲ. ಆ್ಯಂಟನಿ, ಗುಲಾಂ ನಬಿ, ಅಹ್ಮದ್‌ ಪಟೇಲ್‌, ಅಂಬಿಕಾ ಸೋನಿಯಂಥವರು ಗಂಟೆಗಟ್ಟಲೆ ಕುಳಿತು ಮನವೊಲಿಸಲು ಪ್ರಯತ್ನ ಮಾಡಿದರೂ ರಾಹುಲ್‌ ಮನಸ್ಸು ಬದಲಿಸಿಲ್ಲ. 

ನೇರವಾಗಿ ಹಿರಿಯರ ಮೇಲೆಯೇ ಕೆಂಡ ಕಾರುತ್ತಿರುವ ರಾಹುಲ್‌ ಹತ್ತು ವರ್ಷ ಕೇಂದ್ರದಲ್ಲಿ ಮಂತ್ರಿ ಆದವರು ಪ್ರಚಾರಕ್ಕೆ ಬರಲಿಲ್ಲ. ನಯಾ ಪೈಸೆ ದುಡ್ಡು ಬಿಚ್ಚಲಿಲ್ಲ. ಬರೀ ಮಕ್ಕಳ ಭವಿಷ್ಯ ಬಿಟ್ಟರೆ ಯಾರಿಗೂ ಪಕ್ಷದ ಬಗ್ಗೆ ಚಿಂತೆ ಇಲ್ಲ. ನಾನೊಬ್ಬನೇ ಯಾರ ಸಹಕಾರ ಇಲ್ಲದೇ ಮುನ್ನುಗ್ಗಿ ಸೋಲಾಗಿದೆ. ಈಗ ನೀವು ಯಾರಾದರೂ ಮುಂದೆ ಬನ್ನಿ, ಪಾರ್ಟಿ ನಡೆಸಿ ಎಂದು ಬಿರುಸಿನಿಂದಲೇ ಹೇಳಿ ಕಳುಹಿಸುತ್ತಿದ್ದಾರೆ. ಗಾಂಧಿ ಪರಿವಾರದ ಕಾಯಂ ಆಸ್ಥಾನ ಕಲಾವಿದರಿಗೆ ರಾಹುಲ್‌ ಹೀಗೆ ಹಟ ಹಿಡಿದು ಕುಳಿತರೆ ಏನು ಮಾಡುವುದು ಎಂಬುದು ಅರ್ಥವಾಗುತ್ತಿಲ್ಲ. ಅಂದಹಾಗೆ ಹಿರಿಯ ಕಾಂಗ್ರೆಸ್‌ ನಾಯಕರಿಂದ ಒತ್ತಡ ಜಾಸ್ತಿ ಆದಾಗ ಹಠಾತ್ತನೆ ಲಂಡನ್‌ಗೆ ತೆರಳಿದ್ದ ರಾಹುಲ್‌ ನಿನ್ನೆ ಸಂಸತ್ತಿಗೆ ಮಾತ್ರ ಬಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಹುಲ್‌ ರಾಜೀನಾಮೆ ವಿಷಯ ಇನ್ನೂ ಬಗೆಹರಿಯದೇ ಇರುವಾಗ ಸೋನಿಯಾ ಆಪ್ತ ಅಹ್ಮದ್‌ ಪಟೇಲ್‌ ದೈನಂದಿನ ಪಕ್ಷದ ಚಟುವಟಿಕೆ ನಡೆಸಲು ಒಬ್ಬ ಕಾರ್ಯಾಧ್ಯಕ್ಷನನ್ನು ನೇಮಿಸಲು ಸೋನಿಯಾ ಸೂಚನೆ ಮೇರೆಗೆ ಪ್ರಯತ್ನಪಡುತ್ತಿದ್ದಾರೆ. ಆದರೆ, ಯಾರೂ ವರ್ಕಿಂಗ್‌ ಪ್ರೆಸಿಡೆಂಟ್‌ ಆಗಲು ಮುಂದೆ ಬರುತ್ತಿಲ್ಲ. ಮೊದಲು ಆ್ಯಂಟನಿ ಅವರನ್ನು ಕೇಳಲಾಯಿತಾದರೂ ಅವರು ಒಪ್ಪಲಿಲ್ಲ. ನಂತರ ಗುಲಾಂ ನಬಿಗೆ ಕೇಳಿದರೆ, ‘ಬೇಡ. ಮೊದಲೇ ಬಿಜೆಪಿ ಹಿಂದೂ ಮುಸ್ಲಿಂ ಧ್ರುವೀಕರಣದ ರಾಜಕಾರಣ ಮಾಡುತ್ತಿದೆ. ನನಗೆ ಬೇಡ’ ಎಂಬ ಉತ್ತರ ಬಂತು. ವೇಣುಗೋಪಾಲ್‌ರನ್ನು ಕೇಳಿದರೆ ಅವರೂ ತಯಾರಿಲ್ಲ. ಖರ್ಗೆ ಹೆಸರು ಬಂತಾದರೂ ಓಡಾಡಲು ಆಗೋದಿಲ್ಲ, ವಯಸ್ಸು ಇಲ್ಲ ಎಂಬ ಅಭಿಪ್ರಾಯ ಬಂತು. ಯುವಕರಿಗೆ ಕೊಡಲು ಹಿರಿಯರಿಗೆ ಮನಸ್ಸಿಲ್ಲ. ಕೊನೆಗೆ ಈಗ ಎಲ್ಲರೂ ಸೇರಿ ರಾಹುಲ್‌ ಗಾಂಧಿಯ ಬೆನ್ನು ಹತ್ತಿದ್ದು, ಅವರು ಏನು ಮಾಡುತ್ತಾರೆ ಗೊತ್ತಿಲ್ಲ. ಇದು ಕೇವಲ ತಮ್ಮ ಮಹತ್ವ ತೋರಿಸಲು ಮಾಡಿದ ನಿರ್ಣಯವಾದರೆ ರಾಜೀನಾಮೆ ಹಿಂದಕ್ಕೆ ತೆಗೆದುಕೊಳ್ಳಬಹುದು. ಇಲ್ಲಾ ಅವರಿಗೆ ನಿಜಕ್ಕೂ ಹೊಣೆ ನನ್ನದು ಎನಿಸಿದರೆ ತಮ್ಮ ನಿರ್ಣಯಕ್ಕೆ ಗಟ್ಟಿ ಆಗಬಹುದು.

ಹತಾಶೆಯಲ್ಲಿ ರಾಹುಲ್...

ಒಂದು ವಾರದ ಲಂಡನ್‌ ಪ್ರವಾಸ ಮುಗಿಸಿ ನೇರವಾಗಿ ಸಂಸತ್‌ ಅಧಿವೇಶನಕ್ಕೆ ಬಂದಿದ್ದ ರಾಹುಲ್‌ ಮುಖದಲ್ಲಿ ಭಯಂಕರ ನಿರಾಸೆ ಕಾಣುತ್ತಿತ್ತು. ತಾಯಿಯ ಪಕ್ಕದಲ್ಲಿ ಕುಳಿತು ಏನೋ ಗುನುಗುತ್ತಿದ್ದ ರಾಹುಲ್‌ ಉಳಿದ ಯಾರೊಂದಿಗೂ ಮಾತನಾಡೋದು ಬಿಡಿ, ಕೈ ಕುಲುಕುವಾಗಲೂ ನಗುತ್ತಿರಲಿಲ್ಲ. ಕೇರಳದ ಸಂಸದರ ಜೊತೆ ಪ್ರಮಾಣವಚನ ಸ್ವೀಕರಿಸಿದ ರಾಹುಲ್‌ ಸಹಿ ಕೂಡ ಮಾಡದೇ ಹೊರಟಾಗ ಅಧಿಕಾರಿಗಳು ಕೂಗಿ ನಿಲ್ಲಿಸಿ ಸಹಿ ಮಾಡಿಸಿದರು. ಕಳೆದ ವರ್ಷ ಮೋದಿ ಸಾಹೇಬರನ್ನು ಹೋಗಿ ಅಪ್ಪಿಕೊಂಡಿದ್ದ ರಾಹುಲ್‌ ಹಿರಿಯರಾದ ರಾಜನಾಥ ಸಿಂಗ್‌ ಪಕ್ಕದಲ್ಲೇ ಇದ್ದರೂ ಶೇಕ್‌ ಹ್ಯಾಂಡ್‌ ಬಿಡಿ ನಗಲೂ ಇಲ್ಲ.


 ಸೀದಾ ಹೋಗಿ ತಾಯಿಯ ಪಕ್ಕದಲ್ಲಿ ಕುಳಿತ ನಂತರ ಸೋನಿಯಾ ಬಲವಂತ ಮಾಡಿ ತಮ್ಮ ಪಕ್ಕದಲ್ಲಿ ಕುಳಿತ ಮುಸ್ಲಿಂ ಲೀಗ್‌ ನಾಯಕರನ್ನು ಪರಿಚಯ ಮಾಡಿಕೊಟ್ಟರು. ನಿನ್ನೆ ಸಂಸತ್‌ನಲ್ಲಿ ರಾಹುಲ್‌ರನ್ನು ಗಮನಿಸಿದರೆ ಗಾಂಧಿ ಕುಟುಂಬದ ಯುವರಾಜನಿಗೆ ಎರಡನೇ ಬಾರಿಯ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟೇ ಅಲ್ಲ, ಮತ್ತೆ ಮುಂದೆ ಹೋಗಿ ಸವಾಲು ಸ್ವೀಕರಿಸಬೇಕಾ ಎಂಬುದು ಕೂಡ ತಿಳಿಯುತ್ತಿಲ್ಲ. ರಾಹುಲ್‌ ಹತಾಶೆಯ ಜೊತೆ ದ್ವಂದ್ವದಲ್ಲಿದ್ದಾರೆ.

ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ