ಹೀಗೆಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದು, ಅವರ ನೇತೃತ್ವದಲ್ಲೇ ಪಕ್ಷ ಲೋಕಸಭಾ ಚುನಾವಣೆ ಎದುರಿಸಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಪಕ್ಷ ಕೈಗೊಂಡಿರುವ ಈ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ನವದೆಹಲಿ(ಜು.15): 2019ರ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿರುವಾಗಲೇ, ಪ್ರಮುಖ ವಿಪಕ್ಷ ಕಾಂಗ್ರೆಸ್ ದಿಢೀರನೆ ತನ್ನ ರಣತಂತ್ರ ಬದಲಾಯಿಸಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ರಾಹುಲ್ ಗಾಂಧಿ ನೇತೃತ್ವದ ಬದಲಾಗಿ, ಇತ್ತೀಚೆಗೆ ರಾಜಕೀಯ ನೇಪಥ್ಯಕ್ಕೆ ಸರಿದಿದ್ದಾರೆ ಎಂದೇ ಬಣ್ಣಿಸಲಾಗಿದ್ದ ಸೋನಿಯಾರ ನೇತೃತ್ವದಲ್ಲೇ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಹೀಗೆಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದು, ಅವರ ನೇತೃತ್ವದಲ್ಲೇ ಪಕ್ಷ ಲೋಕಸಭಾ ಚುನಾವಣೆ ಎದುರಿಸಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಪಕ್ಷ ಕೈಗೊಂಡಿರುವ ಈ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
2014ರ ಚುನಾವಣೆಗೂ 2019ರ ಚುನಾವಣೆಗೂ ನಡುವಿನ ಭಿನ್ನತೆ, ಇತ್ತೀಚೆಗೆ ಮುಕ್ತಾಯಗೊಂಡ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ, ಹೆಚ್ಚುತ್ತಿರುವ ಮೋದಿ ವರ್ಚಸ್ಸು,ರಾಜಕೀಯ ಚಾಣಾಕ್ಷತನದಲ್ಲಿ ಇನ್ನು ಪಕ್ವತೆ ತೋರದ ರಾಹುಲ್, ಇವೆಲ್ಲವನ್ನೂ ಪರಿಗಣಿಸಿ ಸ್ವತಃ ಅಖಾಡಕ್ಕೆ ಇಳಿಯಲು ಸೋನಿಯಾ ನಿರ್ಧರಿಸಿದ್ದಾರೆ. ಸೋನಿಯಾ ಮಾತ್ರವಲ್ಲದೇ ಅವರ ಜೊತೆಗೆ ಈ ಹಿಂದೆ ಪಕ್ಷದ ರಣತಂತ್ರ ರೂಪಿಸುತ್ತಿದ್ದ ಹಿರಿಯ ನಾಯಕರೇ ಮತ್ತೆ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಮತ್ತೆ ಸೋನಿಯಾ ಕಣಕ್ಕೆ: 2014ರ ಚುನಾವಣೆ ವೇಳೆ ಮೋದಿ ಈಗಿನಷ್ಟು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರಲಿಲ್ಲ. ಜೊತೆಗೆ ದೇಶಾದ್ಯಂತ ಕಾಂಗ್ರೆಸ್ ಪ್ರಮುಖ ಶಕ್ತಿಯಾಗಿತ್ತು. ಆದರೆ ಇತ್ತೀಚಿನ
ವರ್ಷಗಳಲ್ಲಿ ಸ್ಥಳೀಯ ಪಕ್ಷಗಳು ಹೆಚ್ಚು ಶಕ್ತಿಶಾಲಿಯಾಗಿ ಹೊರಹೊಮ್ಮಿವೆ. ಹೀಗಿರುವಾಗ ಇನ್ನೂ ಅನನುಭವಿ ರಾಹುಲ್ ಮತ್ತು ಅವರ ಯುವ ತಂಡಕ್ಕೆ ನೇತೃತ್ವ ವಹಿಸಿದರೆ ಪ್ರಬಲ ಹೋರಾಟ ಕಷ್ಟವಾಗಬಹುದು ಎಂಬುದು ಕಾಂಗ್ರೆಸ್‌ನ ಆತಂಕವಾಗಿದೆ. ಜೊತೆಗೆ ರಾಹುಲ್ ಜೊತೆಗೆ ರಾಜಕೀಯ ನಡೆಸುವುದು ತಮ್ಮ ಕೈಲಾಗದು ಎಂದು ಈಗಾಗಲೇ ಎನ್‌ಸಿಪಿ ನಾಯಕ ಶರದ್ ಪವಾರ್ ಕೈಚೆಲ್ಲಿದ್ದಾರೆ. ಇದು ಕೂಡಾ ಸೋನಿಯಾ ತಮ್ಮ ರಣತಂತ್ರ ಬದಲಿಸಲು ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ.
ಜೊತೆಗೆ ರಾಜಕೀಯದಲ್ಲಿ ಸೋನಿಯಾ ಹೊಂದಿರುವ ಅನುಭವ, ಹಿರಿತನ ಮತ್ತು ವರ್ಚಸ್ಸು, ಅವರನ್ನು ಇತರೆ ಪಕ್ಷಗಳ ನಾಯಕರು ಸದಾ ಗೌರವಿಸುವಂತೆ ಮಾಡಿದೆ. ಹೀಗಾಗಿಯೇ ಸೋನಿಯಾ ಮಾಡುವ ಒಂದು ಟೆಲಿಫೋನ್ ಕರೆಗೆ ಮಾಯಾವತಿ, ಮುಲಾಯಂ, ಮಮತಾ, ಜೆಡಿಯು ನಾಯಕರು ಓಗೊಡುತ್ತಾರೆ. ಈ ವರ್ಚಸ್ಸು ರಾಹುಲ್ ಗೆ ಇನ್ನೂ ಸಿದ್ಧಿಸಿಲ್ಲ. ಇತ್ತೀಚೆಗೆ ರಾಷ್ಟ್ರಪತಿ ಚುನಾವಣೆಗೆ ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲು ಸೋನಿಯಾ ನಡೆಸಿದ ಸಭೆಗೆ 18 ಪಕ್ಷಗಳ ನಾಯಕರು ಹಾಜರಾಗಿದ್ದು ಸೋನಿಯಾರ ಈ ವರ್ಚಸ್ಸಿಗೆ ಸಾಕ್ಷಿ. ಇನ್ನು ಈ ಬಾರಿ ಮೋದಿ ಅಲೆಯಲ್ಲಿ ಬಿಜೆಪಿ ತೇಲುತ್ತಿದೆ. ಹೀಗಾಗಿ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸುವುದು ಕಾಂಗ್ರೆಸ್ ಪಾಲಿಗೆ ಅಸಾಧ್ಯ. ಮೈತ್ರಿ ಮಾಡಿಕೊಳ್ಳದೇ ವಿಧಿಯಲ್ಲ ಎನ್ನುವ ಸ್ಥಿತಿ ಮುಂದಿದೆ. ವಿಪಕ್ಷಗಳು ಪಕ್ಷಗಳು, ರಾಹುಲ್‌ಗೆ ಬದಲಾಗಿ ಸೋನಿಯಾರಲ್ಲೇ ಹೆಚ್ಚಿನ ವಿಶ್ವಾಸ ಹೊಂದಿವೆ.
ಎಲ್ಲಾ ವಿಪಕ್ಷಗಳನ್ನು ಸದ್ಯಕ್ಕೆ ಒಂದುಗೂಡಿಸುವುದು ರಾಹುಲ್‌ಗೆ ಸಾಧ್ಯವಿಲ್ಲ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗಾಂಧಿ, ರಾಹುಲ್ ಮತ್ತು ಅವರ ಯುವ ತಂಡವನ್ನು ಹಿಂದಕ್ಕೆ ಸರಿಸಿ, ತಾವು ಮತ್ತು ತಮ್ಮ ಹಿರಿಯರ ತಂಡದೊಂದಿಗೆ ಚುನಾವಣೆಗೆ ಎದುರಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ -18 ಸುದ್ದಿವಾಹಿನಿ ವರದಿ ಮಾಡಿದೆ.
--
