ಕಾಂಗ್ರೆಸ್ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಇಂಗಿತವನ್ನು ಮಂಗಳವಾರವಷ್ಟೇ ವ್ಯಕ್ತಪಡಿಸಿದ್ದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪಟ್ಟಾಭಿಷೇಕ ಮುಂದಿನ ತಿಂಗಳು ನಡೆಯುವ ಎಲ್ಲ ಸಾಧ್ಯತೆಗಳಿವೆ. ಈ ಮೂಲಕ ‘ರಾಹುಲ್ ಯಾವಾಗ ಅಧ್ಯಕ್ಷರಾಗುತ್ತಾರೆ’ ಎಂಬ ಬಹು ವರ್ಷಗಳ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ದೊರಕುವ ನಿರೀಕ್ಷೆಯಿದೆ.
ನವದೆಹಲಿ(ಸೆ.16): ಕಾಂಗ್ರೆಸ್ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಇಂಗಿತವನ್ನು ಮಂಗಳವಾರವಷ್ಟೇ ವ್ಯಕ್ತಪಡಿಸಿದ್ದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪಟ್ಟಾಭಿಷೇಕ ಮುಂದಿನ ತಿಂಗಳು ನಡೆಯುವ ಎಲ್ಲ ಸಾಧ್ಯತೆಗಳಿವೆ. ಈ ಮೂಲಕ ‘ರಾಹುಲ್ ಯಾವಾಗ ಅಧ್ಯಕ್ಷರಾಗುತ್ತಾರೆ’ ಎಂಬ ಬಹು ವರ್ಷಗಳ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ದೊರಕುವ ನಿರೀಕ್ಷೆಯಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಅವರೇ ಈ ಕುರಿತು ಸುಳಿವು ನೀಡಿದ್ದಾರೆ. ಆಂತರಿಕ ಚುನಾವಣಾ ಪ್ರಕ್ರಿಯೆಯ ಮೂಲಕ ಪಕ್ಷದ ಅಧ್ಯಕ್ಷರಾಗುವ ಬಯಕೆ ರಾಹುಲ್‌ಗೆ ಇದೆ. ಆ ಕಾರ್ಯ ಮುಂದಿನ ತಿಂಗಳೇ ನಡೆಯಬಹುದು ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಅಧ್ಯಕ್ಷ ಹುದ್ದೆ ಅಲಂಕರಿಸುವ ಪ್ರಕ್ರಿಯೆ ತಡವಾಯಿತು ಎಂಬುದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಅಭಿಪ್ರಾಯ. ರಾಹುಲ್ ಅವರು ಸಂಘಟನೆಯ ಚುನಾವಣೆಗಳಿಗಾಗಿ ಕಾಯುತ್ತಿದ್ದಾರೆ. ಆಂತರಿಕ ಚುನಾವಣಾ ಪ್ರಕ್ರಿಯೆಯ ಮೂಲಕವೇ ಅಧ್ಯಕ್ಷರಾಗಿ ಹೊರಹೊಮ್ಮುವ ಅಭಿಪ್ರಾಯ ಅವರಿಗಿದೆ. ರಾಜ್ಯಗಳಲ್ಲಿ ನಡೆಯುತ್ತಿರುವ ಆಂತರಿಕ ಚುನಾವಣೆಗಳು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅದಾದ ಬಳಿಕ ಎಐಸಿಸಿ ಮಟ್ಟದಲ್ಲಿ ಚುನಾವಣೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.
‘ರಾಹುಲ್ ಅವರು ಮುಂದಿನ ತಿಂಗಳು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರಾ’ ಎಂಬ ಪ್ರಶ್ನೆಗೆ, ‘ಪ್ರಾಯಶಃ ಹೌದು’ ಎಂಬ ಉತ್ತರವನ್ನು ಮೊಯ್ಲಿ ಅವರು ನೀಡಿದ್ದಾರೆ. ಅಲ್ಲದೆ ರಾಹುಲ್ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಕೂಡಲೇ ವಹಿಸಿಕೊಳ್ಳಬೇಕು. ಇದರಿಂದ ಪಕ್ಷ ಹಾಗೂ ದೇಶಕ್ಕೆ ಒಳ್ಳೆಯದು. ಅವರು ಅಧಿಕಾರ ವಹಿಸಿಕೊಂಡರೆ ಪಕ್ಷದ ದಿಕ್ಕೇ ಬದಲಾಗುತ್ತದೆ ಎಂದು ಹೇಳಿದ್ದಾರೆ.
ರಾಹುಲ್ ಅಧ್ಯಕ್ಷರಾಗಬೇಕು ಎಂದು ಬಹುಕಾಲದಿಂದ ಬೇಡಿಕೆ ಇತ್ತಾದರೂ, ‘ನಾನಿನ್ನೂ ಕಲಿಯುವುದಿದೆ’ ಎಂದು ಈವರೆಗೆ ಹೇಳುತ್ತ ರಾಹುಲ್ ಮುಂದೂಡುತ್ತಲೇ ಬಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೇ ಬಹುಮತ: ಇದೇ ವೇಳೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
