ಬೆಂಗಳೂರು[ಜು.28]: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಿರುವುದನ್ನು ತೆರವುಗೊಳಿಸುವುದರ ಪರವಾಗಿ ಲೋಕಸಭೆಯಲ್ಲಿ ಮಾತನಾಡಿರುವ ವಯನಾಡ್‌ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವನ್ಯಜೀವಿ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬಂಡೀಪುರ ಅಭಯಾರಣ್ಯ ಮಧ್ಯಭಾಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766ರ ಮಾರ್ಗದಲ್ಲಿ ಹಗಲು ವೇಳೆ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ಪರಿಣಾಮ ಹಲವು ವನ್ಯ ಜೀವಿಗಳ ಪ್ರಾಣಕ್ಕೆ ಕಂಟಕವಾಗುತ್ತಿದೆ. ಹೀಗಿರುವಾಗ ರಾತ್ರಿ ವಾಹನ ನಿಷೇಧ ತೆರವುಗೊಳಿಸಲು ಕೇಳುವುದು ಮೂರ್ಖತನದ ಪರಮಾವಧಿ ಎಂದು ಪರಿಸರ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಬೇಕು ಎಂಬ ಮನವಿಗೆ ಸಂಬಂಧಿಸಿದಂತೆ ಹಲವು ಸಮಿತಿಗಳು ಸುದೀರ್ಘವಾಗಿ ಪರಿಶೀಲನೆ ನಡೆಸಿವೆ. ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಬಾರದು ಎಂದು ಪ್ರತಿಪಾದಿಸಿದ್ದಾರೆ.

ಬಂಡೀಪುರದಲ್ಲಿ ರಾತ್ರಿ ಸಂಚಾರ: ಕೇರಳ ಪರ ರಾಹುಲ್ ಬ್ಯಾಟಿಂಗ್

ಕೇರಳದ ವಯನಾಡಿಗೆ ರಸ್ತೆ ಮಾರ್ಗ ಸಂಪರ್ಕಿಸುವುದಕ್ಕಾಗಿ ಹುಣಸೂರು ಮಾರ್ಗವಾಗಿ 92 ಕೋಟಿ ರು.ವೆಚ್ಚದಲ್ಲಿ ಪರ್ಯಾಯ ರಸ್ತೆ ನಿರ್ಮಿಸಲಾಗಿದೆ. ಹೀಗಿರುವಾಗ ರಾತ್ರಿ ಸಂಚಾರ ಮುಕ್ತಗೊಳಿಸುವ ಅಗತ್ಯವೇನು ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ವನ್ಯ ಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, 1972ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಂಡೀಪುರದಲ್ಲಿ ವನ್ಯ ಜೀವಿಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅಭಯಾರಣ್ಯ ಘೋಷಿಸಿದ್ದರು. ಆದರೆ, ಈಗ ರಾಹುಲ್‌ ಗಾಂಧಿ ಅದೇ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವಂತೆ ಕೋರುತ್ತಿದ್ದು, ವನ್ಯಜೀವಿಗಳ ಜೀವಕ್ಕೆ ಕಂಟಕ ತರಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರಿರುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿ ವನ್ಯ ಜೀವಿಗಳ ನೆಮ್ಮದಿ ಹಾಳು ಮಾಡಲು ಮುಂದಾದಂತೆ ಕಾಣುತ್ತಿದೆ. ರಾಹುಲ್‌ ಗಾಂಧಿ ಅಂತಹವರ ಒತ್ತಡಕ್ಕೆ ಮಣಿದು ರಾತ್ರಿ ಸಂಚಾರ ಮುಕ್ತಗೊಳಿಸುವ ತೀರ್ಮಾನ ಕೈಗೊಂಡರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು.

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ವಿಧಿಸಿರುವ ಕುರಿತು ರಾಹುಲ್‌ ಗಾಂಧಿಗೆ ಸೂಕ್ತ ಮಾಹಿತಿ ಇಲ್ಲ. ಪರಿಣಾಮ ಈ ರೀತಿಯ ಪ್ರಶ್ನೆ ಕೇಳಿದ್ದಾರೆ. ದೇಶದ ಒಟ್ಟು ಭೂಪ್ರದೇಶದಲ್ಲಿ ಶೇ.5 ರಷ್ಟುಭೂಮಿ ಮಾತ್ರ ವನ್ಯಜೀವಿಗಳಿಗೆ ಲಭ್ಯವಿದ್ದು ಅವುಗಳಿಗೆ ಮುಕ್ತವಾಗಿ ಜೀವಿಸಲು ಅವಕಾಶ ನೀಡಬೇಕು.

- ಸಂಜಯ್‌ ಗುಬ್ಬಿ, ವನ್ಯಜೀವಿ ತಜ್ಞ.