ಮೂವರಲ್ಲಿ ಯಾರು?1 ಗೃಹ ಸಚಿವರೂ ಆಗಿರುವ ಹಾಲಿ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷ ಡಾಜಿ.ಪರಮೇಶ್ವರ್‌ ಅವರೇ ಮುಂದುವರಿಕೆ2 ಭಾರೀ ಲಾಬಿ ನಡೆಸಿರುವ ಸಚಿವ ಡಿ.ಕೆ. ಶಿವಕುಮಾರ್‌ ಹೊಸ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ3 ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡಕ್ಕೆ ಮಣಿದು ಎಸ್‌. ಆರ್‌. ಪಾಟೀಲ್‌ಗೆ ಹುದ್ದೆ ನೀಡುವ ಸಂಭವನೀಯತೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದ ಗೊಂದಲ ಈ ಮಾಸಾಂತ್ಯಕ್ಕೂ ಮುನ್ನವೇ ಅಂತ್ಯಗೊಳ್ಳುವುದು ಬಹುತೇಕ ಖಚಿತ. ಏಕೆಂದರೆ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ರಾಜ್ಯದ ಎಲ್ಲಾ ಪ್ರಮುಖ ನಾಯಕರಿಗೆ ಬುಲಾವ್‌ ನೀಡಿದ್ದು, ಮೇ 28ರ ಸಂಜೆ ಇಡೀ ತಂಡ ದೆಹಲಿಗೆ ತೆರಳಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ಕೆ.ಜೆ. ಜಾಜ್‌ರ್‍, ಎಚ್‌.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಡಿ.ಕೆ. ಶಿವಕುಮಾರ್‌, ರೋಷನ್‌ಬೇಗ್‌ ಅವರಿಗೆ ಬುಲಾವ್‌ ಬಂದಿದೆ. ಈ ನಾಯಕರು ಮೇ 28ರ ಸಂಜೆ ದೆಹಲಿಗೆ ತೆರಳಲಿದ್ದಾರೆ.

ಮೇ 28ರ ರಾತ್ರಿ ಅಥವಾ ಮೇ 29ರಂದು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ವೇಳೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕುರಿತು ಒಂದು ನಿರ್ಣಯ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದಕ್ಕೆ ಸಂವಾದಿಯಾಗಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು, ಕæಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದ ಪ್ರಶ್ನೆಗೆ ಈ ಮಾಸಾಂತ್ಯಕ್ಕೆ ಉತ್ತರ ಸಿಗಲಿದೆ. ಪರಮೇಶ್ವರ್‌ ಅವರೇ ಮುಂದು ವರೆಯುತ್ತಾರೋ ಅಥವಾ ಬೇರೆ ಯಾರಾದರೂ ಈ ಹುದ್ದೆಗೆ ಬರುತ್ತಾರೋ ಎಂಬ ನಿಮ್ಮ ಪ್ರಶ್ನೆಗಳಿಗೆಲ್ಲ ಈ ಮಾಸಾಂತ್ಯಕ್ಕೆ ಅತ್ಯಂತ ಶಕ್ತಿಶಾಲಿ ಉತ್ತರವನ್ನೇ ಹೈಕಮಾಂಡ್‌ ನೀಡಲಿದೆ ಎಂದು ಹೇಳಿದರು. ಎಂಬಲ್ಲಿಗೆ ಈ ಮಾಸಾಂತ್ಯದ ವೇಳೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗೆಗಿನ ಗೊಂದಲ ಪರಿಹಾರವಾಗು ವುದು ಬಹುತೇಕ ಖಚಿತ. ಆದರೆ, ಏನು ಆಗಲಿದೆ ಎಂಬುದು ಮಾತ್ರ ಇನ್ನೂ ಸ್ಪಷ್ಟಗೊಂಡಿಲ್ಲ. ಕಾಂಗ್ರೆಸ್‌ ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಂಬಂಧಿಸಿದಂತೆ ಮೂರು ಸಾಧ್ಯತೆಗಳು ಮಾತ್ರ ಈಗ ಉಳಿದಿವೆ. ಹಾಲಿ ಅಧ್ಯಕ್ಷ ಪರಮೇಶ್ವರ್‌ ಮುಂದುವರಿಕೆ, ಸಚಿವ ಡಿ.ಕೆ.ಶಿವಕುಮಾರ್‌ಗೆ ಅಧ್ಯಕ್ಷಗಿರಿ ಅಥವಾ ಸಿದ್ದು ಬಯಕೆಯಂತೆ ಎಸ್‌.ಆರ್‌.ಪಾಟೀಲ್‌ಗೆ ಕೆಪಿಸಿಸಿ ನೇತೃತ್ವ. ಉಳಿದಂತೆ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಹಿಂತಿರುಗುವ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಅಧ್ಯಕ್ಷಗಿರಿ ಒಲಿಯುವ ಸಾಧ್ಯತೆಗಳು ಕ್ಷೀಣಿಸಿವೆ.

ಉನ್ನತ ಮೂಲಗಳ ಪ್ರಕಾರ ಈ ಮೂರು ಸಾಧ್ಯತೆಗಳ ಪೈಕಿ ಪರಮೇಶ್ವರ್‌ ಅವರ ಮುಂದುವರಿ ಕೆಗೆ ಹೆಚ್ಚಿನ ಅವಕಾಶವಿದೆ. ಏಕೆಂದರೆ, ಕಾಂಗ್ರೆಸ್‌ಗೆ ಪ್ರಬಲ ಮತಬ್ಯಾಂಕ್‌ ಆಗಿರುವ ದಲಿತರಿಗೆ ಅಧ್ಯಕ್ಷ ಹುದ್ದೆ ತಪ್ಪಿಸಿದರೆ, ಹೊಸತಾಗಿ ಅದೇ ಸಮುದಾಯ ದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬೇಡಿಕೆ ಈಡೇರಲು ಈಗ ಸಾಧ್ಯವಿಲ್ಲ. ಏಕೆಂದರೆ, ದಲಿತರೂ ಆಗಿರುವ ಖರ್ಗೆ ಅವರು ರಾಜ್ಯಕ್ಕೆ ಹಿಂತಿರುಗುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ದಲಿತರಾದ ಪರಮೇಶ್ವರ್‌ ಮುಂದುವರೆ ದರೆ ಆ ಸಮುದಾಯಕ್ಕೆ ಸಮಾಧಾನವಾದರೂ ಇರುತ್ತದೆ ಎಂಬುದು ಒಂದು ವಾದ. ಇದಲ್ಲದೆ, ಸಿದ್ದರಾ ಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿ ಬ್ಬರಿಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ಅಧ್ಯಕ್ಷ ಹುದ್ದೆ ಪಡೆಯುವುದು ಇಷ್ಟವಿಲ್ಲ. ಹೀಗಾಗಿ, ಈ ಇಬ್ಬರು ನಾಯಕರೊಂದಿಗೆ ಅತ್ಯುತ್ತಮವಲ್ಲದಿದ್ದರೂ ಪರವಾಗಿಲ್ಲ ಎಂಬಂತಹ ಸಂಬಂಧ ಹೊಂದಿರುವ ಪರಮೇಶ್ವರ್‌ ಮುಂದುವರಿ ಕೆಯೇ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಹಿತ ಎಂಬ ಭಾವನೆಯಿದೆ.
ಈ ಹಂತದಲ್ಲಿ ಹೊಸ ಅಧ್ಯಕ್ಷರು ಬಂದರೆ ಪಕ್ಷದ ಹೊಣೆ ನಿರ್ವಹಣೆ, ಹೊಸ ತಂಡ ಕಟ್ಟಿಕೊಳ್ಳುವಂತಹ ವಿಚಾರಗಳಲ್ಲಿ ಗೊಂದಲ ನಿರ್ಮಾಣವಾಗುವ ಸಾಧ್ಯತೆಯಿದೆ. ಹೀಗಾಗಿ ಹಾಲಿ ವ್ಯವಸ್ಥೆಯನ್ನು ಮುಂದುವರೆಸುವುದು ಸೂಕ್ತ ಎಂಬ ವಾದವೂ ಇದೆ. ಈ ಎಲ್ಲಾ ಕಾರಣಗಳಿಗಾಗಿ ಪರಮೇಶ್ವರ್‌ ಮುಂದುವರೆಯು ತ್ತಾರೆ ಎನ್ನಲಾಗಿದೆ. ಆದರೆ, ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಬೇಕು ಎಂದರೆ ಸಚಿವ ಸ್ಥಾನ ತೊರೆಯಲಿ ಎಂಬ ಷರತ್ತನ್ನು ಸಿಎಂ ಆಪ್ತ ಬಳಗ ಮುಂದಿಟ್ಟಿದೆ ಎನ್ನಲಾಗಿದೆ. ಇದು ಪರಮೇಶ್ವರ್‌ ಅವರಿಗೆ ಒಪ್ಪಿತವಿಲ್ಲ. ಅವರು ಎರಡೂ ಹುದ್ದೆಯನ್ನು ಬಯಸುತ್ತಿದ್ದಾರೆ. ಈ ತೊಡಕನ್ನು ಹೈಕಮಾಂಡ್‌ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಇದರ ಜತೆಗೆ, ಪತ್ರಿಕಾಗೋಷ್ಠಿಯಲ್ಲಿ ವೇಣುಗೋ ಪಾಲ್‌ ಅವರು, ಹಾಲಿ ರಾಜ್ಯದಲ್ಲಿರುವ ಕಾಂಗ್ರೆಸ್‌ ತಂಡ (ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಒಳಗೊಂಡ ತಂಡ) ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಈ ತಂಡವು ಮುಂದಿನ ಚುನಾವಣೆಯಲ್ಲಿ ಯಶಸ್ವಿಯಾಗುತ್ತದೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದರು. ಇದು ಸಹ ಪರಮೇಶ್ವರ್‌ ಅವರ ಮುಂದುವರಿಕೆಯ ಸೂಚನೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಹೈಕಮಾಂಡ್‌ಗೆ ಶಿವಕುಮಾರ್‌ ಪ್ರಿಯ: ಇನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ಅಧ್ಯಕ್ಷ ಹುದ್ದೆ ನೀಡುವ ಬಗ್ಗೆ ಹೈಕಮಾಂಡ್‌ಗೆ ಉತ್ಸಾಹವಿದೆ. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಹ ಶಿವಕುಮಾರ್‌ ಅಧ್ಯಕ್ಷರಾಗುವುದು ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷಕ್ಕೆ ಹಿತ ಎಂದೇ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಹುದ್ದೆ ದೊರಕಿದರೆ ಸಚಿವ ಸ್ಥಾನ ಬಿಡಲು ಶಿವಕುಮಾರ್‌ ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಶಿವಕುಮಾರ್‌ಗೆ ರಾಜ್ಯ ನಾಯಕರಿಂದ ಪ್ರಬಲ ಪ್ರತಿರೋಧವಿದೆ. ಈ ಪ್ರತಿರೋಧ ತೋರುತ್ತಿರುವ ಸಿಎಂ ಹಾಗೂ ಖರ್ಗೆ ಅವರನ್ನು ಹೈಕಮಾಂಡ್‌ನ ವರಿಷ್ಠರೇ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪ್ರಯತ್ನ ನಡೆದಾಗ ಸಿದ್ದರಾಮಯ್ಯ ಹಾಗೂ ಖರ್ಗೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ.

ಎಸ್‌ಆರ್‌ ಪಾಟೀಲ್‌ಗೆ ಸಿಎಮ್ಮೇ ಆಧಾರ: ಇನ್ನು ಸಿಎಂ ಅವರು ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರಿಗೆ ಈ ಹುದ್ದೆ ನೀಡಬೇಕು. ಇದಕ್ಕೆ ಎಸ್‌.ಆರ್‌. ಪಾಟೀಲ್‌ ಸೂಕ್ತ. ಇದು ನನ್ನ ಸಲಹೆ ಎಂದು ಈಗಾಗಲೇ ಹೈಕಮಾಂಡ್‌ಗೆ ತಿಳಿಸಿದ್ದಾರೆ. ಎಸ್‌.ಆರ್‌. ಪಾಟೀಲರಿಗೆ ಹುದ್ದೆ ನೀಡಿದರೆ ಇಡೀ ಚುನಾವಣೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆ ಹೊರುತ್ತೇನೆ ಎಂದು ಸೂಚ್ಯವಾಗಿ ಹೈಕಮಾಂಡ್‌ಗೆ ಸಿಎಂ ಹೇಳಿದ್ದಾರೆ ಎನ್ನಲಾಗಿದೆ. ಈ ವಾದವನ್ನು ಹೈಕಮಾಂಡ್‌ ಒಪ್ಪಿದರೆ ಆಗ ಪಕ್ಷ ಹಾಗೂ ಸರ್ಕಾರ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಹಿಡಿತಕ್ಕೆ ಬರುತ್ತದೆ. ಮುಂದಿನ ಚುನಾವಣೆಯ ಗೆಲುವಿನ ದೃಷ್ಟಿಯಿಂದ ಇದು ಆಪ್ಯಾಯಮಾನ ಎಂಬುದು ನಿಜ. ಆದರೆ, ಈ ರೀತಿ ಸಿದ್ದರಾಮಯ್ಯ ಅವರಿಗೆ ಪಕ್ಷ ಹಾಗೂ ಸರ್ಕಾರ ಎರಡನ್ನೂ ಹೈಕಮಾಂಡ್‌ ಯಾವ ಕಾರಣಕ್ಕೂ ನೀಡುವುದಿಲ್ಲ ಎಂದು ವಿರೋಧಿ ಗುಂಪುಗಳು ವಾದಿಸುತ್ತಿವೆ. ಹೀಗಾಗಿ ಲಭ್ಯವಿರುವ ಮೂರು ಸಾಧ್ಯತೆಗಳಲ್ಲಿ ಪರಮೇಶ್ವರ್‌ ಮುಂದುವರಿಕೆ ಸಾಧ್ಯತೆಯೇ ಸರಳ ಹಾಗೂ ಸಮಸ್ಯೆಗಳಿಲ್ಲದ ದಾರಿ ಎಂಬುದು ಈ ಗುಂಪಿನ ವಾದ.

ಜಾಫರ್‌ ಮನೆಗೆ ವೇಣು, ಪರಂ, ದಿನೇಶ್‌ ಭೇಟಿ

ಬೆಂಗಳೂರು: ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಡಳಿತದ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದ ರಾಜ್ಯ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ಸಿ.ಕೆ. ಜಾಫರ್‌ ಷರೀಫ್‌ ಅವರ ನಿವಾಸಕ್ಕೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್‌ ನೂತನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮಾತುಕತೆ ನಡೆಸಿದ್ದಾರೆ. ಗುರುವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ನಗರದ ಬೆನ್ಸನ್‌ಟೌನ್‌ನ ಜಾಫರ್‌ ಷರೀಫ್‌ ಅವರ ನಿವಾಸಕ್ಕೆ ಭೇಟಿ ನೀಡಿ ವೇಣುಗೋಪಾಲ್‌ ಮಾತುಕತೆ ನಡೆಸಿದರು. ಈ ವೇಳೆ ಜಾಫರ್‌ ಷರೀಫ್‌ ಅವರ ಆರೋಗ್ಯ ವಿಚಾರಿಸಿದ ವೇಣುಗೋಪಾಲ್‌, ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷ ಸಂಘಟನೆಗೆ ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.