ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ವ್ಯಸ್ತವಾಗಿದ್ದ ಅವರು ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮೊದಲ ಬಾರಿ ಎಬಿಪಿ ನ್ಯೂಸ್ ಹಾಗೂ ಜೀ ನ್ಯೂಸ್ ಚಾನಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಅವುಗಳ ಆಯ್ದ ಭಾಗ ಇಲ್ಲಿದೆ.
ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದೀರಿ. ದೇಶದಲ್ಲಿ ನಿಮ್ಮ ಪಕ್ಷದ ಸಂಘಟನೆ ದುರ್ಬಲವಾಗಿದೆ. ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಮೇಲೆತ್ತಲು ಹಾಗೂ ಮೋದಿ ಹವಾ ಇಳಿಸಲು ನಿಮ್ಮ ಕಾರ್ಯಸೂಚಿ ಏನಿರುತ್ತದೆ?
ದೇಶದ ರಾಜಕಾರಣ ಅತ್ಯಂತ ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತಿದೆ. ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ಮೋದಿಯವರನ್ನು ಕೀಳಾಗಿ ನಿಂದಿಸಿದ್ದರಿಂದ ನಾವು ಅವರನ್ನು ಪಕ್ಷದಿಂದಲೇ ಹೊರಹಾಕಿದೆವು. ಆದರೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಬಗ್ಗೆ ಸ್ವತಃ ಮೋದಿ ಏನೇನು ಮಾತನಾಡುತ್ತಿದ್ದಾರೆ ಎಂಬುದನ್ನು ದೇಶವೇ ಕೇಳುತ್ತಿದೆ. ಮನಮೋಹನ ಸಿಂಗ್ ಅವರು ದೇಶದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು. 10 ವರ್ಷ ಈ ದೇಶವನ್ನು ಮುನ್ನಡೆಸಿದವರು. ದೇಶದಲ್ಲಿ ಯಾರೂ ತರದ ಆರ್ಥಿಕ ಸುಧಾರಣಾ ಕ್ರಮಗಳನ್ನು ತಂದವರು. ಅಂತಹವರ ಬಗ್ಗೆ ಮೋದಿ ಆಡುವ ಮಾತುಗಳನ್ನು ಯಾರಾದರೂ ಒಪ್ಪಲು ಸಾಧ್ಯವೇ? ಕಾಂಗ್ರೆಸ್ ಪಕ್ಷದ ಮನಸ್ಥಿತಿ ಹಾಗೂ ಬಿಜೆಪಿಯ ಮನಸ್ಥಿತಿಯಲ್ಲಿರುವ ವ್ಯತ್ಯಾಸ ವಿದು. ದೇಶವನ್ನು ಪ್ರೀತಿಯಿಂದ ಕಟ್ಟಬೇಕು. ಗಾಂಧೀಜಿಯವರ ವಿಚಾರಧಾರೆ ಎಲ್ಲೆಡೆ ಹರಡಬೇಕು. ಇದು ನನ್ನ ಗುರಿ.
ನಾಳೆ ನೀವು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತೀರಿ. ಅದಾಗಿ ಎರಡೇ ದಿನಕ್ಕೆ, ಅಂದರೆ 18ನೇ ತಾರೀಖಿಗೆ ಗುಜರಾತ್ ಚುನಾವಣೆಯ ಫಲಿತಾಂಶ ಬರುತ್ತದೆ. ನಿಮ್ಮ ನಿರೀಕ್ಷೆ ಏನು?
ಗುಜರಾತ್ನಲ್ಲಿ ಬಿಜೆಪಿ ಬಗ್ಗೆ ಜನರಿಗೆ ಬಹಳ ಸಿಟ್ಟಿದೆ. ಮೋದಿಯವರಿಂದ ಆ ರಾಜ್ಯಕ್ಕೆ ದೂರದೃಷ್ಟಿಯ ಯಾವುದೇ ಯೋಜನೆ ದೊರೆತಿಲ್ಲ. ನನ್ನ ಪ್ರಕಾರ ಈ ಚುನಾವಣೆ ಏಕಪಕ್ಷೀಯ ಚುನಾವಣೆಯಂತೆ ನಡೆದು ಕಾಂಗ್ರೆಸ್ ಪಕ್ಷ ಅಭೂತ ಗೆಲುವು ಸಾಧಿಸಲಿದೆ. ಅಚ್ಚರಿಯ ಫಲಿತಾಂಶವನ್ನು ನಾನು ಎದುರು ನೋಡುತ್ತಿದ್ದೇನೆ.
ಸದ್ಯ ದೇಶದಲ್ಲಿ ಕಾಂಗ್ರೆಸ್ನ ಸರ್ಕಾರವಿರುವುದು ಎರಡೇ ಪ್ರಮುಖ ರಾಜ್ಯಗಳಲ್ಲಿ. ಕಾಂಗ್ರೆಸ್ಮುಕ್ತ ಭಾರತ ನಿರ್ಮಿಸುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ. ನಿಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆಯಲ್ಲವೇ?
ಕಾಂಗ್ರೆಸ್ ಪಕ್ಷವೆಂಬುದು ಅತ್ಯಂತ ಹಳೆಯ ವಿಚಾರಧಾರೆ. ಪ್ರೀತಿ, ಭ್ರಾತೃತ್ವ ಹಾಗೂ ಒಗ್ಗಟ್ಟಿನ ವಿಚಾರಧಾರೆಯಿದು. ಇದನ್ನು ಈ ದೇಶದಿಂದ ಹೊರಗೆ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ ಎಂದಾದರೆ ನರೇಂದ್ರ ಮೋದಿಯವರು ತಮ್ಮ ಪ್ರತಿ ಭಾಷಣದಲ್ಲೂ ಅರ್ಧ ಸಮಯವನ್ನು ಕಾಂಗ್ರೆಸ್ ಪಕ್ಷಕ್ಕೇ ಏಕೆ ಮೀಸಲಿಡುತ್ತಾರೆ? ಕಾಂಗ್ರೆಸ್ನ ವಿಚಾರಧಾರೆಯನ್ನು ದೇಶಾದ್ಯಂತ ಹರಡಿ, ಪ್ರೀತಿಯಿಂದ ರಾಜಕಾರಣ ಮಾಡಬೇಕು ಎಂಬ ಕನಸು ನನ್ನದು. ದೇಶದಲ್ಲಿ ರಾಜಕಾರಣದ ಶೈಲಿ ಬದಲಾಗಬೇಕಿದೆ. ರಾಜಕೀಯ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ, ಅದನ್ನು ಪ್ರೀತಿಯಿಂದ ಪ್ರತಿಪಾದಿಸಬೇಕು. ಏಕೆ ಪ್ರತಿಯೊಂದಕ್ಕೂ ಗದ್ದಲ ಮಾಡಬೇಕು?
ನಿಮ್ಮ ಪಕ್ಷದಲ್ಲೂ ಬಿಜೆಪಿ ವಿರುದ್ಧ ವಿಷ ಕಾರುವವರು ಇದ್ದಾರಲ್ಲವೇ? ಉದಾಹರಣೆಗೆ ಮೋದಿ ವಿರುದ್ಧ ಮಣಿಶಂಕರ್ ಅಯ್ಯರ್ ಆಡಿದ ಮಾತು...
ಪ್ರಧಾನಿ ಈ ದೇಶದ ಪ್ರತಿನಿಧಿ. ಆ ಹುದ್ದೆಗೆ ಎಲ್ಲರೂ ಗೌರವ ನೀಡಬೇಕು. ಮಣಿಶಂಕರ್ ಅಯ್ಯರ್ ಹೇಳಿದ್ದು ನನಗೆ ಒಪ್ಪಿಗೆಯಿಲ್ಲ ಎಂದು ನಾನು ತಕ್ಷಣ ಹೇಳಿದೆ. ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಲ್ಲ ಎಂದೂ ಹೇಳಿದೆ. ಬಿಜೆಪಿ ಹಾಗೂ ಪ್ರಧಾನಿ ಜತೆ ನಮಗೆ ಭಿನ್ನಾಭಿಪ್ರಾಯಗಳು ಇರುವುದು ನಿಜ. ಅದೇ ವೇಳೆ, ಕಾಂಗ್ರೆಸ್ಸಿಗರ ಬಗ್ಗೆ ಮೋದಿ ಬಹಳ ಕಟುವಾಗಿ ಮಾತನಾಡುವುದೂ ನಿಜ. ಆದರೆ, ಅವರ ಬಗ್ಗೆ ಕಾಂಗ್ರೆಸ್ಸಿಗರು ಆ ರೀತಿ ಮಾತನಾಡುವಂತಿಲ್ಲ.
ನಮ್ಮ ಶತ್ರುದೇಶವಾದ ಪಾಕಿಸ್ತಾನದ ಮಾಜಿ ರಾಯಭಾರಿಗಳ ಜತೆ ಮನಮೋಹನ ಸಿಂಗ್ ಸಭೆ ನಡೆಸಿದ್ದು ನಿಮಗೆ ಒಪ್ಪಿಗೆಯೇ?
ಇದಕ್ಕೆ ಮನಮೋಹನ ಸಿಂಗ್ ಅವರೇ ಚೆನ್ನಾಗಿ ಉತ್ತರಿಸಿದ್ದಾರೆ. ‘ನಾನು ಹಿಂದುಸ್ತಾನದ ಮಾಜಿ ಪ್ರಧಾನಿ. ನನ್ನ ಇಡೀ ಬದುಕನ್ನು ಈ ದೇಶದ ಸೇವೆಗೆ ಅರ್ಪಿಸಿದ್ದೇನೆ. ನನ್ನ ಬಗ್ಗೆ ಅಪನಂಬಿಕೆಯಿಂದ ಮಾತನಾಡುವುದು ದೇಶದ ಪ್ರಧಾನಿಗೆ ಶೋಭೆ ತರುವುದಿಲ್ಲ’ ಎಂದು ಮನಮೋಹನ ಸಿಂಗ್ ಹೇಳಿದ್ದಾರೆ. ಅದಕ್ಕಿಂತ ಇನ್ನೇನು ಬೇಕು.
ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಮೋದಿ ಮತ್ತು ಅಮಿತ್ ಶಾ ಭಾವನಾತ್ಮಕ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿ ಜನರ ಗಮನ ಸೆಳೆಯುತ್ತಾರೆ. ನೀವು ಅಂತಹ ವಿಷಯಗಳ ತಂಟೆಗೆ ಹೋಗುವುದಿಲ್ಲ. ಈ ಧೋರಣೆ ಇನ್ನು ಮುಂದೆ ಬದಲಾಗಲಿದೆಯೇ?
ಮೋದಿವರು ಯಾವಾಗಲೂ ಮುಖ್ಯ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡುತ್ತಾರೆ. ರೈತರ ಬಗ್ಗೆ, ಯುವಕರ ಬಗ್ಗೆ, ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ, ನಿರುದ್ಯೋಗದ ಸಮಸ್ಯೆಯ ಬಗ್ಗೆ ಅವರು ಮಾತನಾಡುವುದೇ ಇಲ್ಲ. ಏಕೆಂದರೆ, ಈ ಸಮಸ್ಯೆಗಳ ಪರಿಹಾರಕ್ಕೆ ಅವರು ಏನೂ ಮಾಡಿಲ್ಲ. ಹಾಗಾಗಿ ಏನು ತಾನೇ ಮಾತನಾಡುತ್ತಾರೆ? ಇಂದು ಒಬ್ಬ ವಿದ್ಯಾರ್ಥಿ ಇಂಜಿನಿಯರ್ ಆಗಲು 15 ಲಕ್ಷ ರು. ಖರ್ಚು ಮಾಡಬೇಕು. ದೇಶದ ಶೇ.90ರಷ್ಟು ಇಂಜಿನಿಯರಿಂಗ್ ಕಾಲೇಜುಗಳು ಖಾಸಗಿ ವ್ಯಕ್ತಿಗಳ ಕೈಲಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡಾಕ್ಟರುಗಳಿಲ್ಲ, ನರ್ಸುಗಳಿಲ್ಲ. ಜನರಿಗೆ ಚಿಕಿತ್ಸೆ ಬೇಕೆಂದರೆ ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕು. ಜನರಿಗೆ ಕನಿಷ್ಠ ಮೂಲಸೌಕರ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯವಲ್ಲವೇ? ಇದನ್ನು ನಿಭಾಯಿಸಲು ಸಾಧ್ಯವಾಗದೇ ಇರುವುದರಿಂದ ಮೋದಿ ಹಾಗೂ ಅಮಿತ್ ಶಾ ಅವರು ಜನರನ್ನು ದಿಕ್ಕುತಪ್ಪಿಸಲು ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಾರೆ. ನಮ್ಮ ಪಕ್ಷ ಅದರಿಂದ ವಿಚಲಿತವಾಗುವುದಿಲ್ಲ.
ನಿಮ್ಮ ಪ್ರಕಾರ ಮೋದಿ ಆಡಳಿತದಿಂದ ದೇಶಕ್ಕೆ ಏನೂ ಪ್ರಯೋಜನವಾಗಿಲ್ಲವೇ?
ಪ್ರಯೋಜನದ ಮಾತು ಬಿಡಿ, ದೇಶಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ನೋಟು ಅಮಾನ್ಯ ಮಾಡಿದ್ದರಿಂದ ಜನರು ಏನೇನು ಬವಣೆ ಪಟ್ಟರು ಎಂಬುದನ್ನು ನೋಡಿದ್ದೀರಿ. ಅದರಿಂದ ದೇಶಕ್ಕೇನಾದರೂ ಲಾಭವಾಯಿತೇ? ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್ಟಿ) ಜಾರಿಗೆ ತಂದಿದ್ದರಿಂದ ಏನಾಯಿತು? ಇತ್ತೀಚೆಗೆ ಅಹಮದಾಬಾದ್ನ ಚಹಾ ಅಂಗಡಿಯವನೊಬ್ಬನ ಜೊತೆ ಮಾತನಾಡುತ್ತಿದ್ದೆ. ‘ರಾಹುಲ್ಜೀ, ಗಬ್ಬರ್ ಸಿಂಗ್ ಟ್ಯಾಕ್ಸ್ ಬಂದ ನಂತರ ನನ್ನ ಆದಾಯ ಅರ್ಧಕ್ಕರ್ಧ ಕಡಿಮೆಯಾಗಿದೆ, ಅಂಗಡಿ ನಡೆಸುವುದೇ ಕಷ್ಟವಾಗಿದೆ’ ಎಂದು ಹೇಳಿದ. ಎಲ್ಲ ವ್ಯಾಪಾರಿಗಳು ಹಾಗೂ ಸಣ್ಣ ಉದ್ಯಮಿಗಳೂ ಇದನ್ನೇ ಹೇಳುತ್ತಾರೆ. ನೋಟು ಅಮಾನ್ಯೀಕರಣದಿಂದ ಕಪ್ಪು ಹಣದ ಶ್ರೀಮಂತರೆಲ್ಲ ತಮ್ಮ ಹಣವನ್ನು ಬಿಳಿ ಮಾಡಿಕೊಂಡರು. ಆದರೆ, ಬಡವರು ನಷ್ಟ ಅನುಭವಿಸಿದರು. ಈ ಸತ್ಯ ಇಂದು ಎಲ್ಲರಿಗೂ ಕಾಣಿಸುತ್ತಿದೆ. ಖಾಸಗಿಯಾಗಿ ಬಿಜೆಪಿಯವರೂ ಇದನ್ನೇ ಹೇಳುತ್ತಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೀರಿ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಬ್ಬರೂ ಗುಜರಾತಿನವರಾದ್ದರಿಂದ ಅವರನ್ನು ಅಲ್ಲೇ ಸೋಲಿಸಿದರೆ ದೊಡ್ಡ ಪೆಟ್ಟು ಕೊಟ್ಟಂತಾಗುತ್ತದೆ ಎಂಬುದು ನಿಮ್ಮ ಲೆಕ್ಕಾಚಾರವೇ?
ಅಲ್ಲ. ನಾಲ್ಕೈದು ತಿಂಗಳ ಹಿಂದೆ ಗುಜರಾತ್ ಪ್ರವಾಸ ಆರಂಭಿಸಿದೆ. ಗುಜರಾತಿಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಆ ರಾಜ್ಯಕ್ಕೆ ಕಾಂಗ್ರೆಸ್ನ ಪ್ರಣಾಳಿಕೆ ಹಾಗೂ ಭವಿಷ್ಯದ ಕಾರ್ಯಸೂಚಿ ಸಿದ್ಧಪಡಿಸುವುದು ನನ್ನ ಗುರಿಯಾಗಿತ್ತು. ಅದಕ್ಕಾಗಿ ಎಲ್ಲ ವರ್ಗದ ಜನರನ್ನೂ ಭೇಟಿ ಮಾಡಿದೆ. ರೈತರು, ಕಾರ್ಮಿಕರು ಹೀಗೆ ಎಲ್ಲರನ್ನೂ ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿದೆ. ಅವುಗಳ ಆಧಾರದ ಮೇಲೆ ಪ್ರಣಾಳಿಕೆ ಸಿದ್ಧಪಡಿಸಿದೆವು. ಆದರೆ, ಬಿಜೆಪಿಯವರ ಪ್ರಚಾರದಲ್ಲಿ ವಿಷಯವೇ ಇರಲಿಲ್ಲ. ಮೊದಲಿಗೆ ನರ್ಮದಾ ಸಂತ್ರಸ್ತರ ವಿಷಯ ಎತ್ತಿದರು. ನಂತರ ಅದನ್ನು ಬಿಟ್ಟು ಒಬಿಸಿಗಳ ಬಗ್ಗೆ ಮಾತನಾಡಿದರು. ನಂತರ ಅಭಿವೃದ್ಧಿ ಯಾತ್ರೆ ಅಂದರು. ಕೊನೆಯಲ್ಲಿ ಇವ್ಯಾವುವೂ ಉಳಿಯಲಿಲ್ಲ. ಮೋದಿಯವರ ಭಾಷಣದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಹೀಗೆ ಯಾವ ಮಾತೂ ಕೇಳಿಲ್ಲ. ಅರ್ಧ ಭಾಷಣ ಕಾಂಗ್ರೆಸ್ ಬಗ್ಗೆ, ಇನ್ನರ್ಧ ಭಾಷಣ ತನ್ನ ಬಗ್ಗೆ. ವಾಸ್ತವವಾಗಿ ಇದು ನನ್ನ ಅಥವಾ ಮೋದಿಯವರ ಚುನಾವಣೆ ಅಲ್ಲ. ಇದು ಗುಜರಾತ್ ಜನರಿಗೆ ಸಂಬಂಧಿಸಿದ್ದು. ಅವರಿಗೆ ಈ ಚುನಾವಣೆಯ ಪ್ರಚಾರದ ಮೂಲಕ ಕಾಂಗ್ರೆಸ್ ಪಕ್ಷ ಒಂದು ವೇದಿಕೆ ಒದಗಿಸಿಕೊಟ್ಟಿದೆ. ಗುಜರಾತ್ನ ಅಭಿವೃದ್ಧಿಗೆ ನಾವು ರೂಪಿಸಿದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ಗೆದ್ದು ಸರ್ಕಾರ ರಚಿಸಿದ ಮೇಲೆ ಜಾರಿಗೆ ತರುತ್ತೇವೆ. ಕಾಂಗ್ರೆಸ್ಮುಕ್ತ ಭಾರತ ನಿರ್ಮಾಣವಾಗುತ್ತಿದೆ ಎಂದಾದರೆ ನರೇಂದ್ರ ಮೋದಿಯವರು ತಮ್ಮ ಪ್ರತಿ ಭಾಷಣದಲ್ಲೂ ಅರ್ಧ ಸಮಯವನ್ನು ಕಾಂಗ್ರೆಸ್ ಪಕ್ಷಕ್ಕೇ ಏಕೆ ಮೀಸಲಿಡುತ್ತಾರೆ? ಕಾಂಗ್ರೆಸ್ನ ವಿಚಾರಧಾರೆಯನ್ನು ದೇಶಾದ್ಯಂತ ಹರಡಿ, ಪ್ರೀತಿಯಿಂದ ರಾಜಕಾರಣ ಮಾಡಬೇಕು ಎಂಬ ಕನಸು ನನ್ನದು. ಪ್ರೀತಿಯಿಂದ ದೇಶ ಕಟ್ಟುವುದು ನನ್ನ ಗುರಿ.
