ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖವಾಗಲಿರುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಶೀಘ್ರ ಅಖೈರುಗೊಳಿಸಿ ಕ್ಷೇತ್ರದಲ್ಲಿ ಸಿದ್ಧತೆ ಆರಂಭಿಸುವಂತೆ ಸದರಿ ಅಭ್ಯರ್ಥಿಗಳಿಗೆ ಸೂಚಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

ಬೆಂಗಳೂರು: ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖವಾಗಲಿರುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಶೀಘ್ರ ಅಖೈರುಗೊಳಿಸಿ ಕ್ಷೇತ್ರದಲ್ಲಿ ಸಿದ್ಧತೆ ಆರಂಭಿಸುವಂತೆ ಸದರಿ ಅಭ್ಯರ್ಥಿಗಳಿಗೆ ಸೂಚಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂಡದ ಜತೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆ ನಡೆಸಿದ ರಾಹುಲ್‌ಗಾಂಧಿ ಈ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ತಡವಾಗಿ ಪ್ರಕಟಿಸಿದರೂ ಚಿಂತೆಯಿಲ್ಲ. ಆದರೆ, ಪ್ರತಿ ಕ್ಷೇತ್ರಕ್ಕೂ ಯಾರು ಅಭ್ಯರ್ಥಿ ಎಂಬುದು ಬೇಗ ಇತ್ಯರ್ಥವಾಗಬೇಕು ಮತ್ತು ಅವರಿಗೆ ಕ್ಷೇತ್ರದಲ್ಲಿ ಕೆಲಸ ಆರಂಭಿಸಲು ಸ್ಪಷ್ಟ ಸೂಚನೆ ನೀಡಬೇಕು ಎಂದು ರಾಹುಲ್ ಗಾಂಧಿ ಸ್ಪಷ್ಟ ಸೂಚನೆ ನೀಡಿದರು ಎನ್ನಲಾಗಿದೆ.

ರಾಜ್ಯ ನಾಯಕತ್ವ ಈಗಾಗಲೇ ಹಲವು ಸುತ್ತಿನ ಸಮೀಕ್ಷೆಗಳನ್ನು ನಡೆಸಿ ಯಾವ ಕ್ಷೇತ್ರದಲ್ಲಿ ಯಾರು ನಿಂತರೆ ಗೆಲ್ಲಬಹುದು, ಹಾಲಿ ಶಾಸಕರ ಸ್ಥಿತಿಯೇನು ಎಂಬುದನ್ನು ಕಂಡು ಕೊಂಡಿದೆ. ಅಲ್ಲದೆ, ಕಳೆದ ಬಾರಿ ಸೋತ ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿಗೆ ಈ ಬಾರಿ ಗೆಲ್ಲುವ ಅವಕಾಶ ಎಷ್ಟಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದೆ.

ಈ ಮಾಹಿತಿಯ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಅಖೈರುಗೊಳಿಸಿ ಹೈಕಮಾಂಡ್ ಅವಗಾಹನೆಗೆ ನೀಡುವಂತೆ ರಾಹುಲ್ ಗಾಂಧಿ ರಾಜ್ಯ ನಾಯಕತ್ವಕ್ಕೆ ಸ್ಪಷ್ಟ ಸೂಚನೆ ನೀಡಿದರು ಎನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಸೋತಿರುವ ಕ್ಷೇತ್ರದಲ್ಲಿ ಸೋತಿರುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆ ಅಥವಾ ಬೇರೊಬ್ಬ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಎಂಬುದನ್ನು ಪರಿಶೀಲನೆ ಮಾಡಬೇಕು.

ಈ ಮೂಲಕ ಶೀಘ್ರವಾಗಿ ಪಟ್ಟಿ ಸಿದ್ಧಪಡಿಸಿ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಮಾಹಿತಿ ನೀಡಬಹುದು. ಇದರಿಂದ ಗೆಲ್ಲುವ ವಾತಾವರಣ ಸೃಷ್ಟಿಸಿಕೊಳ್ಳಲು ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.