ಗೆಲ್ಲಬಹುದು ಎಂಬ ನಿರೀಕ್ಷೆ ಹೆಚ್ಚಿದಂತೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಕಾಂಗ್ರೆಸ್‌ನಲ್ಲಿ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು ಎಂಬ ತಲೆನೋವು ಹೆಚ್ಚಾಗಿದ್ದು, ರಾಹುಲ್ ಕೂಡ ಅಸ್ಪಷ್ಟತೆಯಲ್ಲಿದ್ದಾರೆ.

ಪ್ರಶಾಂತ್ ನಾತು

ನವದೆಹಲಿ : ಗೆಲ್ಲಬಹುದು ಎಂಬ ನಿರೀಕ್ಷೆ ಹೆಚ್ಚಿದಂತೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಕಾಂಗ್ರೆಸ್‌ನಲ್ಲಿ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು ಎಂಬ ತಲೆನೋವು ಹೆಚ್ಚಾಗಿದ್ದು, ರಾಹುಲ್ ಕೂಡ ಅಸ್ಪಷ್ಟತೆಯಲ್ಲಿದ್ದಾರೆ.

ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹಲೋಟ್ ನಡುವೆ ಆಂತರಿಕ ಜಗಳ ನಡೆದಿದೆ. ಇನ್ನು ಮಧ್ಯಪ್ರದೇಶದಲ್ಲಿ ರಾಹುಲ್ ಜ್ಯೋತಿರಾದಿತ್ಯ ಸಿಂಧ್ಯಾ ಹೆಸರಿಗೆ ಒಲವು ತೋರುತ್ತಿದ್ದಂತೆ ಕಮಲನಾಥ್ ಮುನಿಸಿಕೊಂಡು ದೆಹಲಿಯಿಂದ ದೂರ ಉಳಿದಿದ್ದಾರೆ. ಕೊನೆಗೆ ಯಾರನ್ನೂ ಸಿಎಂ ಅಭ್ಯರ್ಥಿ ಎಂದು ಹೆಸರಿಸದೆ ಚುನಾವಣೆಗೆ ಹೋಗಲು ರಾಹುಲ್ ತೀರ್ಮಾನಿ ಸಬಹುದು ಎಂಬ ಸ್ಥಿತಿಯಿದೆ.

ಬಚ್ಚನ್ ಕುಟುಂಬ ದೀದಿ ಬಳಿಗೆ

ಸಮಾಜವಾದಿ ಪಕ್ಷದಿಂದ ರಾಜ್ಯಸಭೆ ಅವಧಿ ಮುಗಿಸುತ್ತಿರುವ ಅಮಿತಾಭ್ ಬಚ್ಚನ್‌ರ ಹೆಂಡತಿ ಜಯಾ ಬಚ್ಚನ್ ಈ ಬಾರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಪಕ್ಷದಿಂದ ರಾಜ್ಯಸಭೆಗೆ ಬರಲಿದ್ದಾರಂತೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಒಂದೇ ಸ್ಥಾನ ಇರುವುದರಿಂದ ಅಲ್ಲಿಂದ ಈ ಬಾರಿ ರಾಜ್ಯಸಭೆಗೆ ಹೋಗುವುದು ಕಷ್ಟ ಎಂದು ಗೊತ್ತಾದ ಮೇಲೆ ಸ್ವತಃ ಅಮಿತಾಭ್ ಬಚ್ಚನ್ ದೀದಿ ಯನ್ನು ಸಂಪರ್ಕಿಸಿದ್ದರಿಂದ ಬಂಗಾಳಿ ಆಗಿರುವ ಜಯಾರನ್ನು ಮೇಲ್ಮನೆಗೆ ಕಳಿಸಲು ಒಪ್ಪಿದ್ದಾರಂತೆ.

ಮೊದಲಿಗೆ ಗಾಂಧಿ ಕುಟುಂಬ, ನಂತರ ಮುಲಾಯಂ, ಅಮರ್ ಸಿಂಗ್ ಜೊತೆಗೆ ಚೆನ್ನಾಗಿದ್ದ ಬಚ್ಚನ್ ಕುಟುಂಬ ಮೋದಿ ಜೊತೆಗೂ ದೋಸ್ತಿ ಮಾಡಿತ್ತು. ಆದರೆ ಈಗ ಮಮತಾ ಜೊತೆ ಗೆಳೆತನಕ್ಕೆ ತಯಾರಾಗಿದ್ದು ನೋಡಿದರೆ ಬಚ್ಚನ್ ಕುಟುಂಬದ ರಾಜಕೀಯ ಪ್ರಭಾವದ ಅಂದಾಜಾಗುತ್ತದೆ.