ರಾಹುಲ್ ಮತ್ತೆ ಸಕ್ರಿ ಯ ಚುನಾವಣೆ ನಡೆವ ರಾಜ್ಯಗಳ ನಾಯಕರ ಜೊತೆ ಸಭೆ ಪಕ್ಷ ಸಂಘಟನೆಗೆ ರಾಹುಲ್‌ಗಾಂಧಿ ವಾಪಸ್ ಸುಳಿವು

ನವದೆಹಲಿ[ಜೂ.26]: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿ, ಪಕ್ಷ ಸಂಘಟನೆಯಿಂದ ದೂರ ಉಳಿದಿರುವ ರಾಹುಲ್ ಗಾಂಧಿ ಅವರು ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳ ಕಾಂಗ್ರೆಸ್ ನಾಯಕರ ಸಭೆಯನ್ನು ಈ ವಾರ ಕರೆದಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ರಾಹುಲ್ ಅವರು ಪಕ್ಷ ಸಂಘಟನೆ ವ್ಯವಹಾರಕ್ಕೆ ಮರಳುತ್ತಿರುವ ಲಕ್ಷಣ ಇದಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಜತೆಗೆ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬಹುದೆಂಬ ಕಾಂಗ್ರೆಸ್ಸಿಗರ ಆಸೆಗೆ ಜೀವ ಬಂದಂತಾಗಿದೆ

Add Asianetnews Kannada as a Preferred SourcegooglePreferred

ಜೂ.27ರಂದು ಮಹಾರಾಷ್ಟ್ರ, ಮರುದಿನ ಹರ‌್ಯಾಣ ಹಾಗೂ ದೆಹಲಿ ಘಟಕಗಳ ನಾಯಕರ ಸಭೆಯನ್ನು ರಾಹುಲ್ ಗಾಂಧಿ ಅವರು ಕರೆದಿದ್ದಾರೆ. ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದಲ್ಲದೆ, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ವರದಿ ನೀಡುವಂತೆ ಎಲ್ಲ ರಾಜ್ಯ ಘಟಕಗಳ ಉಸ್ತುವಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಸದ್ಯದಲ್ಲೇ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಕೂಡ ನಡೆಯಲಿದೆ. ರಾಹುಲ್ ಅವರು ಹುದ್ದೆಯಲ್ಲಿ ಮುಂದುವರಿಯತ್ತಾರಾ ಇಲ್ಲವಾ ಎಂಬ ಕುರಿತು ಆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಚುನಾವಣೆ ಬಳಿಕ ನಡೆದ ಪ್ರಥಮ ಸಿಡಬ್ಲ್ಯುಸಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಾಹುಲ್ ಹೇಳಿದ್ದರು. ಅವರನ್ನು ಮನವೊಲಿಸಲು ಕಾಂಗ್ರೆಸ್ಸಿಗರು ಏನೆಲ್ಲಾ ಪ್ರಯತ್ನ ಪಟ್ಟರೂ ಏನೂ ಆಗಿರಲಿಲ್ಲ. ಈ ನಡುವೆ, ಅವರು ಯಾವ ನಾಯಕರನ್ನೂ ಭೇಟಿ ಮಾಡುತ್ತಿರಲಿಲ್ಲ. ಪಕ್ಷದ ಸಂಘಟನೆ ಬಗ್ಗೆಯೂ ತಲೆಕೆಡಿಸಿಕೊಂಡಿರಲಿಲ್ಲ.