ನವದೆಹಲಿ[ಜ.05]: ರಫೇಲ್‌ ಯುದ್ಧವಿಮಾನ ಖರೀದಿಯಂಥ ಗಂಭೀರ ವಿಷಯದ ಚರ್ಚೆ ನಡೆದಿರುವಾಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಕಣ್ಣು ಹೊಡೆದು ಮತ್ತೆ ಸುದ್ದಿಯಾಗಿದ್ದಾರೆ.

6 ತಿಂಗಳ ಹಿಂದೆ ಸಂಸತ್‌ ಕಲಾಪದಲ್ಲಿ ತಮ್ಮದೇ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರತ್ತ ಕಣ್ಣು ಮಿಟುಕಿಸಿ ರಾಹುಲ್‌ ಸುದ್ದಿಯಾಗಿದ್ದರು. ಇದು ವ್ಯಾಪಕ ಟೀಕೆ-ಟಿಪ್ಪಣಿ-ಜೋಕುಗಳಿಗೆ ನಾಂದಿ ಹಾಡಿತ್ತು.

ಶುಕ್ರವಾರ ರಫೇಲ್‌ ಖರೀದಿ ಚರ್ಚೆ ನಡೆದ ಸಂದರ್ಭದಲ್ಲಿ ಅಣ್ಣಾಡಿಎಂಕೆಯ ತಂಬಿದೊರೈ ಅವರು ಮಾತನಾಡುತ್ತಿದ್ದರು. ಈ ವೇಳೆ ಅವರ ಹಿಂದೆಯೇ ಕೂತಿದ್ದ ರಾಹುಲ್‌ ಅವರು ಯಾರೋ ಸಹೋದ್ಯೋಗಿಯತ್ತ ಮುಖ ತಿರುಕಿಸಿ ಕಣ್ಣು ಹೊಡೆದು ನಕ್ಕ ದೃಶ್ಯಗಳು ಲೋಕಸಭಾ ಟೀವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಇದಕ್ಕೆ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಪ್ರತಿಕ್ರಿಯಿಸಿ, ‘ರಾಹುಲ್‌ ಯಾವತ್ತೂ ಗಂಭೀರ ವ್ಯಕ್ತಿಯಲ್ಲ ಎಂಬುದು ಇದರಿಂದ ಸಾಬೀತಾಗಿದೆ’ ಎಂದಿದ್ದಾರೆ.