ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಅವ್ಯವಹಾರ ಆರೋಪಗಳ ಕುರಿತು ಮುಜರಾಯಿ ಇಲಾಖೆ ಆಯುಕ್ತರು ವಿಚಾರಣೆ ನಡೆಸಬೇಕು ಮತ್ತು ವಿಚಾರಣೆಗೆ ಮೂವರು ಸದಸ್ಯರ ಸಮಿತಿ ರಚನೆ ಮಾಡಲು ಆಯುಕ್ತರು ಸ್ವತಂತ್ರರು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಹೊರಡಿಸಿದ ಆದೇಶ ರದ್ದು ಕೋರಿ ಸ್ವಾಮೀಜಿ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.ಶುಕ್ರವಾರ ಸ್ವಾಮೀಜಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರು, ಮೂಲ ಅರ್ಜಿದಾರ ಎದುರ್ಕಳ ಈಶ್ವರ ಭಟ್ ಮತ್ತು ಎ.ಕೆ. ಜಯಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು (ಜು.07): ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಅವ್ಯವಹಾರ ಆರೋಪಗಳ ಕುರಿತು ಮುಜರಾಯಿ ಇಲಾಖೆ ಆಯುಕ್ತರು ವಿಚಾರಣೆ ನಡೆಸಬೇಕು ಮತ್ತು ವಿಚಾರಣೆಗೆ ಮೂವರು ಸದಸ್ಯರ ಸಮಿತಿ ರಚನೆ ಮಾಡಲು ಆಯುಕ್ತರು ಸ್ವತಂತ್ರರು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಕುಂಟಿಯಾ ಹೊರಡಿಸಿದ ಆದೇಶ ರದ್ದು ಕೋರಿ ಸ್ವಾಮೀಜಿ ಅವರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರ ಸ್ವಾಮೀಜಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರು, ಮೂಲ ಅರ್ಜಿದಾರ ಎದುರ್ಕಳ ಈಶ್ವರ ಭಟ್ ಮತ್ತು ಎ.ಕೆ. ಜಯಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣವೇನು?:
ಮಠದಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊಂದಿರುವ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಸ್ಥಾನದಿಂದ ರಾಘವೇಶ್ವರ ಸ್ವಾಮೀಜಿ ಅವರನ್ನು ಕೆಳಗಿಸಬೇಕು ಎಂದು ಕೋರಿ ಎದುರ್ಕುಳ ಈಶ್ವರಭಟ್ ಎಂಬುವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಮನವಿ ಕುರಿತು ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹೈಕೋರ್ಟ್ ನಿರ್ದೇಶಿಸಿತ್ತು. ಅದರಂತೆ ವಿಚಾರಣೆ ನಡೆಸಿದ್ದ ಮುಖ್ಯ ಕಾರ್ಯದರ್ಶಿಗಳು, ಮಠದ ಅವ್ಯವಹಾರಗಳ ಕುರಿತು ಮುಜರಾಯಿ ಇಲಾಖೆ ಆಯುಕ್ತರು ಶೀಘ್ರ ವಿಚಾರಣೆ ನಡೆಸಬೇಕು. ಅಗತ್ಯವಿದ್ದಲ್ಲಿ ವಿಚಾರಣೆಗಾಗಿ ಮೂವರು ಸದಸ್ಯರಿಗಿಂತ ಕಡಿಮೆ ಇಲ್ಲದ ಸಮಿತಿ ರಚಿಸಲು ಆಯುಕ್ತರು ಸ್ವತಂತ್ರರಿದ್ದಾರೆ. ವಿಚಾರಣೆ ನಡೆಸಿ ಸಮಿತಿ ನೀಡುವ ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಿ 2017 ರ ಮೇ 23 ರಂದು ಆದೇಶ ಹೊರಡಿಸಿದ್ದರು. ಈ ಆದೇಶ ರದ್ದುಪಡಿಸುವಂತೆ ಕೋರಿ ರಾಘವೇಶ್ವರ ಭಾರತೀ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಚಾರಣೆ ವೇಳೆ ಸ್ವಾಮೀಜಿ ಪರ ವಕೀಲರು ವಾದ ಮಂಡಿಸಿ, ಹೈಕೋರ್ಟ್ ಆದೇಶದಂತೆ ಸ್ವಾಮೀಜಿ ವಿರುದ್ಧ ಅರ್ಜಿಯ ವಿಚಾರಣೆಯನ್ನು ಮುಖ್ಯ ಕಾರ್ಯದರ್ಶಿ ಮಾತ್ರ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಅದನ್ನು ಬಿಟ್ಟು ತಮ್ಮ ಅಧಿಕಾರವನ್ನು ಬೇರೊಬ್ಬರಿಗೆ ಹಸ್ತಾಂತರಿಸಬಾರದು. ಆದರೆ, ಮುಖ್ಯಕಾರ್ಯದರ್ಶಿಗಳು ಸ್ವಾಮೀಜಿ ವಿರುದ್ಧ ಆರೋಪಗಳ ವಿಚಾರಣೆಯನ್ನು ಮುಜರಾಯಿ ಇಲಾಖೆ ಆಯುಕ್ತರಿಗೆ ವಹಿಸಿದ್ದಾರೆ. ಹೀಗಾಗಿ ತಮ್ಮ ಅಧಿಕಾರವನ್ನು ಬೇರೊಬ್ಬರಿಗೆ ವಹಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದೂರಿದರು. ಅಲ್ಲದೆ, ಮುಜರಾಯಿ ಇಲಾಖೆ ಆಯುಕ್ತರು ಅಥವಾ ಬೇರೊಂದು ಸಮಿತಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಆದೇಶ ಕಾನೂನು ಬಾಹಿರ ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಮೇಲಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ ಅಡಿ ಮಠಗಳು ಬರವುದಿಲ್ಲ. ಆದ್ದರಿಂದ ಸ್ವಾಮೀಜಿ ವಿರುದ್ಧ ವಿಚಾರಣೆ ನಡೆಸಲು ಮುಜರಾಯಿ ಇಲಾಖೆ ಆಯುಕ್ತರಿಗೆ ಅಧಿಕಾರವಿಲ್ಲ. ಹೀಗಾಗಿ, ಮುಖ್ಯ ಕಾರ್ಯದರ್ಶಿಗಳ ಆದೇಶ ರದ್ದುಪಡಿಸಬೇಕು ಮತ್ತು ಅರ್ಜಿ ಇತ್ಯರ್ಥವರಗೆ ಆ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಮುಜರಾಯಿ ಇಲಾಖೆ ಆಯುಕ್ತರು ರಚಿಸುವ ಸಮಿತಿ ಕೇವಲ ಸತ್ಯಶೋಧನಾ ಸಮಿತಿಯಾಗಿರುತ್ತದೆ. ಈ ಸಮಿತಿಯು ಮಠಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಮಾತ್ರ ಪರಿಶೋಧನೆ ನಡೆಸಿ ವರದಿ ನೀಡುತ್ತದೆ ಹೊರತು ಮಠ ಅಥವಾ ಸ್ವಾಮೀಜಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದ್ದರಿಂದ ಮುಖ್ಯ ಕಾರ್ಯದರ್ಶಿಗಳ ಆದೇಶಕ್ಕೆ ಮಧ್ಯಂತರ ತಡೆ ನೀಡಬಾರದು. ಈ ಕುರಿತು ಮುಂದಿನ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದು, ಅದಕ್ಕೆ ಸಮಯಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.11 ಕ್ಕೆ ಮುಂದೂಡಿತು.
