ಮಗನನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ಈ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಭಾರತಿ ವಿಷ್ಣುವರ್ಧನ್ ಬೇಡಿಕೊಂಡರು.
ಬೆಂಗಳೂರು(ನ. 10): ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮಾಸ್ತಿಗುಡಿ ಶೂಟಿಂಗ್ ವೇಳೆ ದುರಂತ ಸಾವನ್ನಪ್ಪಿದ ನಟ ರಾಘವ್ ಉದಯ್'ರವರ ಅಂತಿಮ ದರ್ಶನವನ್ನು ಸಾರ್ವಜನಿಕರು ಪಡೆದರು. ಭಾರತಿ ವಿಷ್ಣುವರ್ಧನ್ ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು ಯಡಿಯೂರು ಕೆರೆ ಬಳಿ ಇರುವ ಉದಯ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಭಾರತಿ ವಿಷ್ಣುವರ್ಧನ್ ಜೊತೆ ಅನಿರುದ್ಧ್, ಕೆ.ಶಿವರಾಮ್ ಮೊದಲಾದವರು ಆಗಮಿಸಿದರು. ಇನ್ನು ಬಿಜೆಪಿ ಮುಖಂಡರಾದ ಆರ್.ಅಶೋಕ್, ಶರವಣ ಮೊದಲಾದ ರಾಜಕಾರಣಿಗಳೂ ಉದಯ್ ನಿವಾಸಕ್ಕೆ ಭೇಟಿ ಇತ್ತು ಪಾರ್ಥಿವ ಶರೀರದ ದರ್ಶನ ಪಡೆದರು. ರಾಘವ್ ಉದಯ್ ಕುಟುಂಬಕ್ಕೆ ಶರವಣ 1 ಲಕ್ಷ ಹಾಗೂ ಆರ್.ಅಶೋಕ್ 2 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಭಾರತಿ ವಿಷ್ಣುವರ್ಧನ್ ಬೇಸರ:
ಮಗನನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ಈ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಭಾರತಿ ವಿಷ್ಣುವರ್ಧನ್ ಬೇಡಿಕೊಂಡರು. ಉದಯ್ ನಿವಾಸದ ಬಳಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ತಿಳಿದೂ ತಿಳಿದೂ ತಪ್ಪು ಮಾಡಲಾಗಿದೆ ಎಂದು ಬೇಸರಿಸಿಕೊಂಡರು.
"ಇದು ದುರಂತ.. ಬಹಳ ಸಂಕಟ ಆಗುತ್ತೆ... ತಿಳಿದೂ ತಿಳಿದೂ ತಪ್ಪು ಮಾಡಿದ್ರೆ ಎಲ್ಲಿ ಹೋಗಿ ಮುಟ್ಟುತ್ತೆ ಅನ್ನೋದೆ ಗೊತ್ತಿರೋದಿಲ್ಲ... ಪರ್ಮಿಷನ್ ಇಲ್ಲದೇ ಇದ್ದಾಗ ಮಾಡಲೇಬಾರದಿತ್ತು. ಆ ಮಕ್ಕಳು ಹೇಳಿದಾರೆ ನನಗೆ ಈಜು ಬರಲ್ಲ, ಇಲ್ಲಿಂದ ನಾಲ್ಕು ಅಡಿ ಹೋಗ್ತೇನೆ ಅಷ್ಟೇ.. ಆಗಲ್ಲ ಅಂದರೂ ಮಧ್ಯಕ್ಕೆ ಹೋಗಿ ಮಾಡಿಸಿದಾರೆ... ಈಗ ಇರುವ ಸಿನಿಮಾ ಟೆಕ್ನಾಲಜಿಯಲ್ಲಿ ಏನು ಬೇಕಾದರೂ ಯಾವ ಥರ ಬೇಕಾದರೂ ಮಾಡಬಹುದು... ಎಲ್ಲಿಯಾದ್ರೂ ಇಂಥ ದುರಂತ ಆಗದೇ ಇರಲಿ.." ಎಂದು ಮಾಜಿ ಸಿನಿಮಾ ತಾರೆ ಭಾರತಿ ವಿಷ್ಣುವರ್ಧನ್ ಹೇಳಿದರು.
"ಸಂಪಾದನೆ ಮಾಡುವ ಗಂಡಸನ್ನೇ ಕಳೆದುಕೊಂಡ ಈ ಕುಟುಂಬಕ್ಕೆ ಏನೇ ಪರಿಹಾರ ಕೊಟ್ರು ಏನು ಪ್ರಯೋಜನ..? ಆ ದುಡ್ಡು ಎಷ್ಟು ದಿನ ಇರುತ್ತೆ? ಆ ಕುಟುಂಬಕ್ಕೆ ದುಃಖ ಭರಿಸಿಕೊಳ್ಳುವ ಶಕ್ತಿ ಸಿಗಲಿ" ಎಂದು ಭಾರತಿ ಆಶಿಸಿದರು.
