ಸಿಎಜಿ, ಪಿಎಸಿ ಕುರಿತು ವಿವಾದ ಹಿನ್ನೆಲೆ| ರಫೇಲ್‌ ತೀರ್ಪಿನಲ್ಲಿ ತಿದ್ದುಪಡಿ ಕೋರಿ ಸುಪ್ರೀಂಗೆ ಕೇಂದ್ರ ಅರ್ಜಿ 

ನವದೆಹಲಿ[ಡಿ.16]: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ಕೆಲವೊಂದು ತಿದ್ದುಪಡಿ ಕೋರಿ ಕೇಂದ್ರ ಸರ್ಕಾರ ಶನಿವಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿದ್ದ, ಮಹಾಲೇಖಪಾಲರು (ಸಿಎಜಿ) ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಗೆ ಸಂಬಂಧಿಸಿದ ಮಾಹಿತಿಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ವಿವಾದ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ವಿವರಿಸಿದೆ.

ರಫೇಲ್‌ : ಎಜಿ, ಸಿಎಜಿಗೆ ಪಿಎಸಿ ಸಮನ್ಸ್‌?

‘ರಫೇಲ್‌ ಯುದ್ಧ ವಿಮಾನಗಳ ಬೆಲೆ ಕುರಿತ ವಿವರವನ್ನು ಸಿಎಜಿ ಜತೆ ಹಂಚಿಕೊಳ್ಳಲಾಗಿದೆ. ತರುವಾಯ ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸಿದೆ’ ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನ 25ನೇ ಪ್ಯಾರಾದಲ್ಲಿ ಹೇಳಿತ್ತು. ಈ ಬಗ್ಗೆ ಕಾಂಗ್ರೆಸ್‌ ಆಕ್ಷೇಪ ಎತ್ತಿತ್ತು. ಪಿಎಸಿಗೆ ತಾವೇ ಅಧ್ಯಕ್ಷರಾಗಿದ್ದು, ಆ ವರದಿಯನ್ನು ತಾವು ಎಂದೂ ನೋಡಿಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದರು.

ರಫೇಲ್ ಡೀಲ್ : ಅಂಬಾನಿ ಜೊತೆಗಿದ್ದಾರೆ 30 ಪಾಲುದಾರರು

ಇದರ ಬೆನ್ನಲ್ಲೇ ತೀರ್ಪಿನಲ್ಲಿ ತಿದ್ದುಪಡಿ ಕೋರಿ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಅದರಲ್ಲಿ ‘ರಫೇಲ್‌ ದರ ಮಾಹಿತಿಯನ್ನು ಈಗಾಗಲೇ ಸಿಎಜಿ ಜೊತೆ ಹಂಚಿಕೊಳ್ಳಲಾಗಿದೆ ಮತ್ತು ವರದಿಯನ್ನು ಪಿಎಸಿ ಪರಿಶೀಲಿಸಿದೆ ಎಂದು ಸಾಮಾನ್ಯ ಅರ್ಥದಲ್ಲಿ ಹೇಳಲಾಗಿತ್ತು. ಈ ಪದರ ಮೊದಲ ಭಾಗವನ್ನು ಭೂತಕಾಲದಲ್ಲಿಯೂ ಮತ್ತು ಎರಡನೇ ಭಾಗವನ್ನು ಭವಿಷ್ಯ ಕಾಲದಲ್ಲಿಯೂ ಉಲ್ಲೇಖಿಸಿ ಹೇಳಲಾಗಿತ್ತು. ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸುವುದು ಸಾಮಾನ್ಯ ಪ್ರಕ್ರಿಯೆಯಾದ ಕಾರಣ ಹೀಗೆ ಬರೆಯಲಾಗಿತ್ತು. ಆದರೆ ನ್ಯಾಯಾಲಯದ ತೀರ್ಪಿನಲ್ಲಿ ಈಸ್‌ ಎಂಬ ಪದದ ಬದಲಾಗಿ ಹ್ಯಾಸ್‌ಬೀನ್‌ ಎಂಬ ಪದವನ್ನು ಬಳಸಲಾಗಿದೆ. ಹೀಗಾಗಿ ಸಿಎಜಿ ವರದಿಯನ್ನು ಈಗಾಗಲೇ ಪಿಎಸಿ ಪರಿಶೀಲಿಸಿದೆ ಎಂಬ ಅರ್ಥ ಬಂದಿದೆ. ಹೀಗಾಗಿ ಹ್ಯಾಸ್‌ಬೀನ್‌ ಎಂದು ಬಳಸಿದ ಜಾಗದಲ್ಲಿ ಈಸ್‌ ಎಂದು ಬಳಸಿ ತಿದ್ದುಪಡಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.