ಅಂಥ ಕುರುಡರ ಜಗತ್ತಿನ ಅತಿರಂಜಕ, ಅತಿರಮ್ಯ, ಸುಂದರ ದೃಶ್ಯಕಾವ್ಯ- ರಾಗ.ಸದಾ ಹೊಗೆಯಾಡೋ ಟೆರೇಸು, ಬಳಿದಂತೆ ಕಣ್ಣಿಗೆ ರಾಚುವ ಬಣ್ಣಗಳು, ಯಾವ ಕಾಲದ್ದು ಅಂತ ಸ್ಪಷ್ಟಗೊಳ್ಳದ ಟೆಲಿಫೋನು ಬೂತು, ಹಳೆ ಟೆಲಿಫೋನು, ಹಾಸಿಗೆ, ಕಿಟಕಿ, ಆಕಾಶ, ಬೀದಿ, ತಳ್ಳೋಗಾಡಿ, ಜಟಕಾ ಗಾಡಿ, ಹೇರ್‌ಸ್ಟೈಲ್‌, ಮೇಕಪ್ಪು, ವಸ್ತ್ರ ವಿನ್ಯಾಸ. ಈ ಹಿನ್ನೆಲೆಯಲ್ಲಿ ಇಬ್ಬರ ಕತೆ ಹೇಳಲು ಹೊರಡುತ್ತಾರೆ ನಿರ್ದೇಶಕರು. ಒಬ್ಬ ಸ್ವಾಭಿಮಾನಿ, ಬಡ, ಅನಾಥ ಟೆಲಿಫೋನ್‌ ಆಪರೇಟರು.

ಚಿತ್ರ: ರಾಗ

ತಾರಾಗಣ: ಮಿತ್ರ, ಭಾಮ, ಕಡ್ಡಿಪುಡಿ ಚಂದ್ರು, ಅವಿನಾಶ್‌ ಮತ್ತಿತರರು.

ನಿರ್ದೇಶನ: ಪಿಸಿ ಶೇಖರ್‌

ನಿರ್ಮಾಣ: ಮಿತ್ರ

ಸಂಗೀತ: ಅರ್ಜುನ್‌ ಜನ್ಯ

ಛಾಯಾಗ್ರಹಣ: ವೈದಿ

ರೇಟಿಂಗ್‌: *** 

ಕುರುಡು ಅನ್ನೋದು ಕಣ್ಣಿರುವವರಿಗೆಲ್ಲಾ ಒಂದು ರಮ್ಯ ಕಲ್ಪನೆ!


ಅವರಿಗೆ ಎಲ್ಲಾ ಗೊತ್ತಾಗುತ್ತದೆ, ಕಣ್ಣಿಲ್ಲದೇ ಹೋದರೂ ಪ್ರೀತಿ ಆಗುತ್ತದೆ, ಅವರ ಮನಸ್ಸು ಶುದ್ಧವಾಗಿರುತ್ತದೆ, ಅವರು ಉಳಿದವರಿಗಿಂತ ತುಂಬ ವಿಶಾಲ ಹೃದಯದವರು- ಹೀಗೆ ನಾವು ವ್ಯಾಖ್ಯಾನ ಮಾಡುತ್ತಾ ಹೋಗಿಬಿಡುತ್ತೇವೆ. ಅದ್ಯಾಕೋ ಅವರು ಉಳಿದವರಂತೇ ಅಂತ ನಂಬಿಕೊಳ್ಳಲು ನಾವು ಎಡವುತ್ತೇವೆ. ಸಿನಿಮಾ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುರುಡ ಅಂದ ತಕ್ಷಣ ಅವನು ನಡೆಯೋ ರೀತಿ, ಕಣ್ಣು ಹೊರಳಿಸೋ ರೀತಿ, ಅವನು ಗ್ರಹಿಸೋ ರೀತಿ- ಇವೆಲ್ಲವನ್ನೂ ಅತಿರಂಜಕವಾಗಿ ಗ್ರಹಿಸುತ್ತದೆ.

 ಅಂಥ ಕುರುಡರ ಜಗತ್ತಿನ ಅತಿರಂಜಕ, ಅತಿರಮ್ಯ, ಸುಂದರ ದೃಶ್ಯಕಾವ್ಯ- ರಾಗ.

ಸದಾ ಹೊಗೆಯಾಡೋ ಟೆರೇಸು, ಬಳಿದಂತೆ ಕಣ್ಣಿಗೆ ರಾಚುವ ಬಣ್ಣಗಳು, ಯಾವ ಕಾಲದ್ದು ಅಂತ ಸ್ಪಷ್ಟಗೊಳ್ಳದ ಟೆಲಿಫೋನು ಬೂತು, ಹಳೆ ಟೆಲಿಫೋನು, ಹಾಸಿಗೆ, ಕಿಟಕಿ, ಆಕಾಶ, ಬೀದಿ, ತಳ್ಳೋಗಾಡಿ, ಜಟಕಾ ಗಾಡಿ, ಹೇರ್‌ಸ್ಟೈಲ್‌, ಮೇಕಪ್ಪು, ವಸ್ತ್ರ ವಿನ್ಯಾಸ. ಈ ಹಿನ್ನೆಲೆಯಲ್ಲಿ ಇಬ್ಬರ ಕತೆ ಹೇಳಲು ಹೊರಡುತ್ತಾರೆ ನಿರ್ದೇಶಕರು. ಒಬ್ಬ ಸ್ವಾಭಿಮಾನಿ, ಬಡ, ಅನಾಥ ಟೆಲಿಫೋನ್‌ ಆಪರೇಟರು.

ಮತ್ತೊಬ್ಬಳು ಶ್ರೀಮಂತ ಹರೆಯದ ಹುಡುಗಿ. ಜೀವನದಲ್ಲಿ ಕಣ್ಣಿಲ್ಲದವರನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಅಂತನ್ನುವ ಅನು, ನಾಯಕಿ. ಜೀವನದಲ್ಲಿ ಕಣ್ಣಿಲ್ಲದಿದ್ದರೇನು, ಬದುಕಿ ಅನುಭವಿಸಲು ಜಗತ್ತು ವಿಶಾಲವಾಗಿದೆ ಅನ್ನುವ ಮಿತ್ರ, ನಾಯಕ. ಈ ಇಬ್ಬರೂ ಒಂದು ಆತ್ಮಹತ್ಯಾಕ್ಷಣದಲ್ಲಿ ಒಂದಾಗುತ್ತಾರೆ. ಒಬ್ಬರಿಗೊಬ್ಬರು ಜಗತ್ತಾಗುತ್ತಾರೆ, ಪ್ರೀತಿ ಆಗುತ್ತದೆ, ಒಂದು ಹಂತದಲ್ಲಿ ಅವಳಿಗೆ ಕಣ್ಣೂ ಬಂದುಬಿಡುತ್ತದೆ. ಮುಂದೆ, ತೆರೆ ಮೇಲೆ ನೋಡಿ ಆನಂದಿಸಿ.

ತುಂಬ ಸುಂದರ ಬೀದಿಗಳಲ್ಲಿ ಫೇರಿ ಟೇಲ್‌ನಂತೆ ಕತೆ ಹೇಳುವುದಕ್ಕೆ ಹೊರಡುವ ನಿರ್ದೇಶಕ ಪಿಸಿ ಶೇಖರ್‌ ದೃಶ್ಯವಾಗಿ ಕಣ್ಣು ತುಂಬುತ್ತಾರೆ. ವೈದಿ ಛಾಯಾಗ್ರಹಣ ಮತ್ತು ಕೆನೆಡಿ ಕಲಾ ನಿರ್ದೇಶನದ ಅದ್ಭುತ ಫ್ರೇಮ್‌ಗಳ ಮೇಲೆ ಕತೆ ಕಟ್ಟಲು ಶುರು ಮಾಡುತ್ತಾರೆ. ಹಾಗಾಗಿ ಇಡೀ ಕತೆ ನಿಮಗೆ ರಮ್ಯವಾಗಿ ಗೋಚರವಾಗುತ್ತದೆ. ಆದರೆ ಅದರೊಳಗೆ ಹೇಳುವ ಕತೆ ಅಪರೂ­ಪದ್ದೇ ಅಂತ ಕೇಳಿದರೆ ಉತ್ತರಿಸುವುದು ಸ್ವಲ್ಪ ಕಷ್ಟ. ಬಹಳ ಹಿಂದೆ ಬಂದ ‘ಸದ್ಮಾ', ‘ಮನ್ಮಥ', ‘ನನ್ನ ಪ್ರೀತಿಯ ರಾಮು' ಥರದ ಸಿನಿಮಾಗಳ ಮತ್ತೊಂದು ರೂಪವಷ್ಟೇ. ಕಲಾವಿದನ ಅಭಿನಯ­ವನ್ನು ಒರೆಗೆ ಹಚ್ಚುವ, ಅತಿರೇಕದ ಕೆಲ ಭಾವುಕ ಕ್ಷಣವನ್ನು ಕಟ್ಟಿಕೊಡುವುದಕ್ಕೆ ಮಾತ್ರ ಸೀಮಿತವಾದಂತೆ ಸಿನಿಮಾ ಶುರುವಾದ ಕೆಲ ಹೊತ್ತಿಗೇ ಪೇಲವವಾಗುತ್ತದೆ.

ಇದಕ್ಕೆ ಕಾರಣ ಅಪರೂಪ­ದ್ದಲ್ಲದ ಕತೆ, ಅಪರೂಪ ಎನ್ನಿಸದ ನಿರೂಪಣೆ ಮತ್ತು ಅದೇ ಮೇಲು, ಕೀಳು, ಪ್ರೇಮ, ಪ್ರೀತಿ, ಕುರುಡುತನಕ್ಕೂ ಪ್ರೀತಿಗೂ ಆಗಿಬರುವುದಿಲ್ಲ ಎಂಬ ಹಳೆ ನಂಬಿಕೆ- ಇತ್ಯಾದಿ. ಸಚಿನ್‌ ಅವರ ಕೆಲ ಸಂಭಾಷಣೆಯ ಮೊನಚು ಹೊರತಾಗಿ ಹೆಚ್ಚಿನ ಕಡೆ ಲೌಡ್‌ ಆದ, ಹೇಳಿಕೆ, ಘೋಷಣೆ ಥರದ ಮಾತುಗಳು ಕತೆಗೆ ಸೂಕ್ಷ್ಮತೆಯನ್ನು ಕೊಡದೇ ಒರಟಾಗಿಸಿಬಿಟ್ಟಿವೆ. ಒಂದೆರಡು ಹಾಡಲ್ಲಿ ಅರ್ಜುನ್‌ ಜನ್ಯ ಕಾಣುತ್ತಾರೆ. ಹಿನ್ನೆಲೆ ಸಂಗೀತ ಪಾರಂಪರಿಕ ಹಿನ್ನೆಲೆ ಸಂಗೀತವನ್ನು ಮೀರಿಲ್ಲ.

ಅಭಿನಯಕ್ಕೆ ಬಂದರೆ ಕೆಲ ಅನಗತ್ಯ ಬಾಡಿ ಲಾಂಗ್ವೇಜ್‌ನ ಹೊರತಾಗಿ ಮಿತ್ರ ಅದ್ಭುತವಾಗಿ ಅಭಿನಯಿಸಿದ್ದಾರೆ. ಕೆಲವೊಂದು ಕಡೆಗಳಲ್ಲಿ ಅವರ ಸೂಕ್ಷ್ಮ ಅಭಿನಯ, ಅವರ ಅಭಿನಯದ ಅನುಭವವನ್ನು ಹೇಳುತ್ತದೆ. ಕಾಮಿಡಿ ಟೈಮಿಂಗ್‌, ಮೌನ, ಹತಾಶೆಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಅದೇ ಥರದ ಸಮರ್ಥ ಅಭಿನಯವನ್ನು ಭಾಮಾ ಅವರೂ ನೀಡಿದ್ದಾರೆ. ಮುದ್ದಾಗಿ ಕಾಣುತ್ತಲೇ, ಅತಿಯಾದ ಕುಣಿತ, ಹಾರಾಟ, ಹಾವಭಾವವನ್ನು ತೋರಿಸುತ್ತಲೇ ಕೆಲವೊಂದು ಫ್ರೇಮ್‌ಗಳಲ್ಲಿ ತೀವ್ರ ಅಭಿನಯವನ್ನು ನೀಡಿ ಮನಗೆಲ್ಲುತ್ತಾರೆ. ಉಳಿದಂತೆ ಅವಿನಾಶ್‌, ತಬ್ಲಾ ನಾಣಿ, ರಮೇಶ್‌ ಭಟ್‌ ಅವರದು ಸಂಯಮದ ಅಭಿನಯ.
ನೀತಿ: ಕಣ್ಣಿಗೆ ಮೆಣಸಿನ ಪುಡಿ ಬಿದ್ದಾಗ ಕೆಲ ಕ್ಷಣ ನಮ್ಮ ಕಣ್ಣು ಪಡುವ ಪಾಡು, ಅನುಭವಿಸುವ ಸಂಕಷ್ಟಅರ್ಥ ಮಾಡಿಕೊಂಡ ಮೇಲಷ್ಟೇ ಕುರುಡುತನ ಅರ್ಥ ಮಾಡಿಕೊಳ್ಳಲು ಹೋಗಬೇಕು!

- ವಿಕಾಸ್ ನೇಗಿಲೋಣಿ, ಕನ್ನಡಪ್ರಭ