ಡಿಕೆಶಿಗೂ ಮೊದಲೇ ಅಶೋಕ್‌ ಮುಂಬೈಗೆ ದೌಡು| ರಾಜೀನಾಮೆ ನೀಡಿದ ಶಾಸಕರು ಬೇರೆ ಹೋಟೆಲ್‌ಗೆ ಶಿಫ್ಟ್‌

ಬೆಂಗಳೂರು[ಜು.10]: ಆಡಳಿತಾರೂಢ ಪಕ್ಷಗಳ ಶಾಸಕರನ್ನು ವಾಪಸ್‌ ಕರೆತರಲು ಬುಧವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮುಂಬೈಗೆ ತೆರಳುವ ಕಾರ್ಯಕ್ರಮ ನಿಗದಿಯಾದ ಬೆನ್ನಲ್ಲೇ ಮಂಗಳವಾರ ಸಂಜೆಯೇ ತರಾತುರಿಯಲ್ಲಿ ಬಿಜೆಪಿ ನಾಯಕ ಆರ್‌.ಅಶೋಕ್‌ ಮತ್ತು ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಅವರು ಮುಂಬೈಗೆ ತೆರಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತೃಪ್ತ ಶಾಸಕರನ್ನು ವಾಪಸ್‌ ಕರೆತರುವ ಸಂಬಂಧ ಮನವೊಲಿಸುವ ಪ್ರಯತ್ನ ಮಾಡುವ ಸಂಬಂಧ ಶಿವಕುಮಾರ್‌ ಅವರು ಬುಧವಾರ ಬೆಳಗ್ಗೆ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿವರೆಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವಕುಮಾರ್‌ ಅವರು ರಾಜೀನಾಮೆ ನೀಡಿರುವ ಶಾಸಕರನ್ನು ವಾಪಸ್‌ ಕರೆದೊಯ್ಯುವ ಪ್ರಯತ್ನ ನಡೆಸಬಹುದು ಎಂಬ ಭೀತಿಯಿಂದ ಅಶೋಕ್‌ ಮತ್ತು ಬೋಪಯ್ಯ ಅವರು ಮಂಗಳವಾರ ರಾತ್ರಿಯೇ ಮುಂಬೈ ತಲುಪಿ ಶಾಸಕರನ್ನು ಭೇಟಿ ಮಾಡಿದರು.

ಕಾಂಗ್ರೆಸ್ಸಿನ ಹಾಗೂ ಸಮ್ಮಿಶ್ರ ಸರ್ಕಾರದ ಟ್ರಬಲ್‌ ಶೂಟರ್‌ ಎಂದೇ ಖ್ಯಾತಿ ಗಳಿಸಿರುವ ಶಿವಕುಮಾರ್‌ ಅವರು ಅತೃಪ್ತ ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆಯೇ ಎಂಬುದು ಅನುಮಾನವಿದೆ. ಶಿವಕುಮಾರ್‌ ಭೇಟಿ ಮಾಡಬಹುದು ಎಂಬ ಉದ್ದೇಶದಿಂದ ಅತೃಪ್ತ ಶಾಸಕರ ವಾಸ್ತವ್ಯವನ್ನು ಮಂಗಳವಾರ ರಾತ್ರಿಯೇ ಇದುವರೆಗಿದ್ದ ಹೋಟೆಲ್‌ನಿಂದ ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.