Asianet Suvarna News Asianet Suvarna News

ಕೇರಳದಲ್ಲಿ ನಿಷೇಧಿತ ವಿಷಕಾರಿ ಘಟಕ ಮಂಡ್ಯದಲ್ಲಿ!

ಕೇರಳದ ಪಿವಿಸಿ ಫ್ಲೆಕ್ಸ್‌ ತಯಾರಕರ ಮಾಫಿಯಾಗೆ ಮಣಿದಿರುವ ರಾಜ್ಯ ಸರ್ಕಾರ ಪರಿಸರಕ್ಕೆ ಅತ್ಯಂತ ಮಾರಕವೆನಿಸಿದ ಪಿವಿಸಿ ಫ್ಲೆಕ್ಸ್‌ ರಿಸೈಕ್ಲಿಂಗ್‌ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿದೆ.

PVC Flex Unit inaugurated In Mandya
Author
Bengaluru, First Published Sep 30, 2018, 8:44 AM IST

ಬೆಂಗಳೂರು :  ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಕೇರಳದ ಪಿವಿಸಿ ಫ್ಲೆಕ್ಸ್‌ ತಯಾರಕರ ಮಾಫಿಯಾಗೆ ಮಣಿದಿರುವ ರಾಜ್ಯ ಸರ್ಕಾರ ಪರಿಸರಕ್ಕೆ ಅತ್ಯಂತ ಮಾರಕವೆನಿಸಿದ ಪಿವಿಸಿ ಫ್ಲೆಕ್ಸ್‌ ರಿಸೈಕ್ಲಿಂಗ್‌ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿದೆ. ಅಷ್ಟೇ ಅಲ್ಲ, ಈ ಘಟಕವು ಸದ್ದುಗದ್ದಲವಿಲ್ಲದೆ ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶನಿವಾರ ಉದ್ಘಾಟನೆಯೂ ಆಗಿದೆ.

ಮಾನವ ಸೃಷ್ಟಿಸಿದ ಅಪಾಯಕಾರಿ ತ್ಯಾಜ್ಯದಲ್ಲಿ ಪಿವಿಸಿ ಫ್ಲೆಕ್ಸ್‌ (ಪಾಲಿ ವಿನೈಲ್‌ ಕ್ಲೋರೈಡ್‌) ಕೂಡ ಒಂದು. ಮನುಷ್ಯನ ಆರೋಗ್ಯ ಹಾಗೂ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುವ ಪಿವಿಸಿ ಫ್ಲೆಕ್ಸನ್ನು ಕೇರಳ ರಾಜ್ಯ ನಿಷೇಧಿಸಿದೆ. ಇತ್ತೀಚೆಗೆ ರಾಜ್ಯ ಸರ್ಕಾರವೂ ಹೈಕೋರ್ಟ್‌ ಆದೇಶದ ಪಿವಿಸಿ ಫ್ಲೆಕ್ಸ್‌ಗೆ ರಾಜ್ಯದಲ್ಲೂ ಕಡ್ಡಾಯ ನಿಷೇಧ ಹೇರಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಅಪಾಯಕಾರಿ ಪಿವಿಸಿ ಫ್ಲೆಕ್ಸ್‌ ಅನ್ನು ರಾಜ್ಯಕ್ಕೆ ತಂದು ಇಲ್ಲಿ ರಿ-ಸೈಕ್ಲಿಂಗ್‌ ನಡೆಸಲು ಅವಕಾಶ ಕೊಟ್ಟಿದೆ.

ಕೇರಳದಲ್ಲಿ ಫ್ಲೆಕ್ಸ್‌ ತಯಾರಿ, ಮಾರಾಟ ಹಾಗೂ ಸಂಸ್ಕರಣೆ, ಪುನರ್‌ಬಳಕೆಗೆ ನಿಷೇಧ ಹೇರಲಾಗಿದೆ. ಹೀಗಾಗಿ ಕೇರಳದ ಸೈನ್‌ ಪ್ರಿಂಟಿಂಗ್‌ ಇಂಡಸ್ಟ್ರೀಸ್‌ ಅಸೋಸಿಯೇಷನ್‌ (ಎಸ್‌ಪಿಐಎ) ಮಂಡ್ಯದ ಮಳವಳ್ಳಿಯ ಕಿರುಗಾವುಲು ಬಳಿ ಪಿವಿಸಿ ಫ್ಲೆಕ್ಸ್‌ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಪರಿಸರಕ್ಕೆ ತೀವ್ರ ಮಾರಕವಾಗಿರುವ ಹಾಗೂ ಉಭಯ ರಾಜ್ಯಗಳಲ್ಲಿ ನಿಷೇಧಕ್ಕೆ ಗುರಿಯಾಗಿರುವ ಪಿವಿಸಿ ಫ್ಲೆಕ್ಸ್‌ ಸಂಸ್ಕರಣೆ ಹಾಗೂ ಪುನರ್‌ಬಳಕೆಗೆ ಅವಕಾಶ ನೀಡಿರುವುದಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸಿದರೆ, ಫ್ಲೆಕ್ಸ್‌ ರೀಸೈಕ್ಲಿಂಗ್‌ ಘಟಕದ ಹೆಸರಿನಲ್ಲಿ ಜಿಲ್ಲಾಡಳಿತವು ಯಾರಿಗೂ ಅನುಮತಿ ನೀಡಿಲ್ಲ. ಸಂಬಂಧಪಟ್ಟಪಂಚಾಯ್ತಿಯು ತ್ಯಾಜ್ಯ ಸಂಗ್ರಹಣೆ ಅಥವಾ ಬೇರ್ಪಡಿಸಲು ಅನುಮತಿ ನೀಡಿರಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆದರೆ, ಸೆ.29ರಂದು ಘಟಕ ನಿರ್ಮಾಣಕ್ಕೆ ಚಾಲನೆ ನೀಡಿರುವ ಎಸ್‌ಪಿಐಎ ತನ್ನ ಆಹ್ವಾನ ಪತ್ರಿಕೆಯಲ್ಲಿ ದೇಶದಲ್ಲಿಯೇ ಮೊದಲ ಪಿವಿಸಿ ಫ್ಲೆಕ್ಸ್‌ ರಿಸೈಕ್ಲಿಂಗ್‌ ಘಟಕ ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಎಂದು ಘೋಷಿಸಿಕೊಂಡಿದೆ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪರಿಸರಕ್ಕೆ ಮಾರಕವಾದ ಘಟಕ ನಿರ್ಮಾಣಕ್ಕೆ ರೆಡ್‌ ಕಾರ್ಪೆಟ್‌ ಹಾಸಿದ ರಾಜ್ಯ ಸರ್ಕಾರದ ವಿರುದ್ಧ ಪರಿಸರ ಪ್ರೇಮಿಗಳು ಹಾಗೂ ಘನ ತ್ಯಾಜ್ಯ ವಿಲೇವಾರಿ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪಿವಿಸಿ ಫ್ಲೆಕ್ಸ್‌ ಘಟಕ:  ಪಿವಿಸಿ (ಪಾಲಿ ವಿನೈಲ್‌ ಕ್ಲೋರೈಡ್‌) ಫ್ಲೆಕ್ಸ್‌ನಲ್ಲಿ ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಮಾರಕವಾಗುವ ರಾಸಾಯನಿಕ ಅಂಶಗಳಿವೆ. ಪಿವಿಸಿ ಫ್ಲೆಕ್ಸ್‌ ಸುಟ್ಟರೆ ಅದರಿಂದ ಡಯಾಕ್ಸಿನ್‌ ಹಾಗೂ ಫಿಯರನ್‌ ಬಿಡುಗಡೆಯಾಗುತ್ತದೆ. ಇದನ್ನು ಉಸಿರಾಡಿದರೆ ಮಕ್ಕಳು ಹಾಗೂ ಮನುಷ್ಯರಲ್ಲಿ ಗಂಭೀರವಾದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಪಿವಿಸಿಯನ್ನು ಸುರಕ್ಷಿತವಾಗಿ ಪುನರ್‌ಬಳಕೆ ಅಥವಾ ವಿಘಟನೆ ಮಾಡುವ ಯಾವುದೇ ವಿಧಾನವೂ ಅಸ್ತಿತ್ವದಲ್ಲಿಲ್ಲ. ಪುನರ್‌ಬಳಕೆ ಮಾಡಲು 200 ಡಿಗ್ರಿವರೆಗೆ ಸುಡಬೇಕು. ಈ ವೇಳೆ ಬಿಡುಗಡೆಯಾಗುವ ವಿಷಕಾರಿ ಅನಿಲದಿಂದ ಪರಿಸರಕ್ಕೆ ಹಾನಿಯಾಗಲಿದೆ.

ಕೇರಳದಲ್ಲಿ ಎನ್‌ಜಿಟಿಯು 2016ರಲ್ಲೇ ಫ್ಲೆಕ್ಸ್‌ ಪ್ರಿಂಟಿಂಗ್‌ ನಿಷೇಧ ಮಾಡಿತ್ತು. ಇದರ ಹೊರತಾಗಿಯೂ 1,500 ಫ್ಲೆಕ್ಸ್‌ ಪ್ರಿಂಟಿಂಗ್‌ ಘಟಕ ಕಾರ್ಯ ನಿರ್ವಹಣೆ ಮಾಡುತ್ತಿದ್ದರಿಂದ ಕೇರಳ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಸಂಪೂರ್ಣ ನಿಷೇಧ ಹೇರಿತ್ತು. ಇದೀಗ ಕೇರಳವು ತನ್ನ ರಾಜ್ಯದಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಕರ್ನಾಟಕಕ್ಕೆ ಕಾಲಿಟ್ಟು ಇಲ್ಲಿನ ಪರಿಸರ ಹಾಳು ಮಾಡಲು ಮುಂದಾಗಿದೆ ಎಂದು ಘನ ತ್ಯಾಜ್ಯ ವಿಲೇವಾರಿ ತಜ್ಞ ಎನ್‌.ಎಸ್‌. ರಮಾಕಾಂತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್‌ ಬಿಂದಿಗೆ ಮತ್ತಿತರ ವಸ್ತುಗಳ ಉತ್ಪಾದನೆ ಹೆಸರಿನಲ್ಲಿ ಹಳೆಯ ಶೆಡ್‌ನಲ್ಲಿ ಘಟಕ ಪ್ರಾರಂಭಿಸಿದ್ದಾರೆ. ಶನಿವಾರ ಬೆಳಗ್ಗೆ ಕೇರಳದಿಂದ 20 ಕಾರುಗಳಲ್ಲಿ ಬಂದು ಟೇಪ್‌ ಕಟ್‌ ಮಾಡಿ ಹೋಗಿದ್ದಾರೆ. ಇದು ಪಿವಿಸಿ ಫ್ಲೆಕ್ಸ್‌ ರಿಸೈಕ್ಲಿಂಗ್‌ ಘಟಕ ಹಾಗೂ ಇದು ಪರಿಸರಕ್ಕೆ ಮಾರಕ ಎಂಬುದು ನಮಗೆ ಮಾಹಿತಿ ಇಲ್ಲ. ಇಲ್ಲಿನ ಪಂಚಾಯ್ತಿಗೂ ಅವರು ತಪ್ಪು ಮಾಹಿತಿ ನೀಡಿದ್ದಾರೆ.

- ರಾಮಚಂದ್ರ, ಸ್ಥಳೀಯ ನಿವಾಸಿ

ಪಿವಿಸಿ ಫ್ಲೆಕ್ಸ್‌ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯಕಾರಿ ತ್ಯಾಜ್ಯ. ಹೀಗಾಗಿ ಅದನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ಪ್ಲಾಸ್ಟಿಕ್‌ಗಿಂತಲೂ ಅಪಾಯಕಾರಿಯಾಗಿದ್ದು, ಪಿವಿಸಿ ಕೋಟೆಡ್‌ ಫ್ಲೆಕ್ಸ್‌ನಲ್ಲಿ ನೀರು ಇಂಗುವುದಿಲ್ಲ. ಜತೆಗೆ ಸುಲಭವಾಗಿ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ. ಪ್ರಸ್ತುತ ನಮ್ಮ ರಾಜ್ಯದ ನಗರಗಳಲ್ಲಿ ತುಂಬಿಕೊಂಡಿರುವ ಪಿವಿಸಿ ಫ್ಲೆಕ್ಸ್‌ ವಿಲೇವಾರಿಯೇ ತಲೆನೋವಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಘಟಕ ನಿರ್ಮಾಣಕ್ಕೆ ಸರ್ಕಾರ ಹೇಗೆ ಅನುಮತಿ ನೀಡಿತು ಎಂಬುದೇ ತಿಳಿಯುತ್ತಿಲ್ಲ.

- ಎನ್‌.ಎಸ್‌. ರಮಾಕಾಂತ್‌, ಸದಸ್ಯರು, ಹೈಕೋರ್ಟ್‌ ಘನ ತ್ಯಾಜ್ಯ ವಿಲೇವಾರಿ ತಜ್ಞರ ಸಮಿತಿ

ಕರ್ನಾಟಕ ಅರಣ್ಯಕ್ಕೆ ಕಸ ಎಸೆದಿದ್ದ ಕೇರಳ

ಈ ಹಿಂದೆಯೂ ಕೇರಳದಲ್ಲಿನ ತ್ಯಾಜ್ಯವನ್ನು ಮೈಸೂರಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶದಲ್ಲಿ ಸುರಿದು ಕೇರಳ ರಾಜ್ಯ ಟೀಕೆಗೆ ಗುರಿಯಾಗಿತ್ತು. ತಮ್ಮ ಪರಿಸರದ ಬಗ್ಗೆ ಅತೀವ ಕಾಳಜಿ ತೋರುವ ಕೇರಳ ರಾಜ್ಯವು ತನ್ನ ನೆರೆ ರಾಜ್ಯ ಕರ್ನಾಟಕದ ಪರಿಸರದ ಮೇಲೆ ದಾಳಿ ಮುಂದುವರೆಸಿದೆ. ಕೇರಳ ಗಡಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಇಂದಿಗೂ ಕಸ ಸುರಿಯುವುದನ್ನು ಮುಂದುವರೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಶ್ರೀಕಾಂತ್‌ ಎನ್‌. ಗೌಡಸಂದ್ರ

Follow Us:
Download App:
  • android
  • ios