ಧಾರವಾಡ (ಜ. 05):  84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮೊದಲೇ ವಿವಾದಕ್ಕೀಡಾಗಿದ್ದ ಉದ್ದೇಶಿತ ಪೂರ್ಣಕುಂಭ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ಸಮ್ಮೇಳನದ ಉದ್ಘಾಟನೆಗೂ ಮುನ್ನ ನಿರಾತಂಕವಾಗಿ ಅದ್ಧೂರಿಯಾಗಿ ನಡೆಯಿತು. 1001 ಮಹಿಳೆಯರು ಖುಷಿ ಖುಷಿಯಿಂದಲೇ ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮೆರವಣಿಗೆಯಲ್ಲಿ 90ಕ್ಕೂ ಹೆಚ್ಚು ವಿಧವೆಯರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಲಾಗುತ್ತದೆ ಎಂಬ ತೀವ್ರ ವಿವಾದಕ್ಕೀಡಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಪೂರ್ಣಕುಂಭವೆಂದಷ್ಟೇ ಮುದ್ರಿಸಿದ್ದರೂ ಸಂವಹನ ಕೊರತೆಯಿಂದ ಸುಮಂಗಲಿಯರಿಂದ ಪೂರ್ಣಕುಂಭ ನಡೆಸುವುದೇಕೆ? ಮಹಿಳೆಯರನ್ನು ಸುಮಂಗಲಿಯರು, ಅಮಂಗಲಿಯರು ಎಂದು ತಾರತಮ್ಯದಿಂದ ನೋಡುವುದೇಕೆ ಎಂದೆಲ್ಲ ಪ್ರಶ್ನೆಗಳು ಎದ್ದಿದ್ದವು. ಕೊನೆಗೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಸುದ್ದಿಗೋಷ್ಠಿ ನಡೆಸಿ, ನಾವು ಸುಮಂಗಲಿಯರು, ಅಮಂಗಲಿಯರು ಎಂದು ಹೇಳಿಯೇ ಇಲ್ಲ. ಪೂರ್ಣಕುಂಭದಲ್ಲಿ ವಿಧವೆಯರು, ತೃತೀಯ ಲಿಂಗಿಗಳು, ಆಸಕ್ತ ಪುರುಷರೂ ಭಾಗವಹಿಸಬಹುದು ಎಂದು ಸ್ಪಷ್ಟನೆ ನೀಡಿದ್ದರು.

ಸಾಂಕೇತಿಕ ಪ್ರತಿಭಟನೆ: ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸುನಂದಾ ಕಡಮೆ ಸೇರಿ ಇತರರು ಸಮ್ಮೇಳನದ ಆವರಣದಲ್ಲಿ ಕೈಗೆ ಕಪ್ಪು ಪಟ್ಟಿಧರಿಸಿ ಸಾಂಕೇತಿಕವಾಗಿ ಪ್ರತಿಭಟಿಸಿದರು. ಒಕ್ಕೂಟದ ಸದಸ್ಯೆಯರು ಅವರ ಮಳಿಗೆಗೆ ಭೇಟಿ ನೀಡಿ ಬೆಂಬಲ ನೀಡಿದವರ ಕೈಗೂ ಕಪ್ಪುಪಟ್ಟಿಕಟ್ಟಿದರು. ಅಲ್ಲದೆ, ಮಹಿಳಾ ದೌರ್ಜನ್ಯ ಖಂಡಿಸಿ ಹಸ್ತಾಕ್ಷರ ಹಾಗೂ ಹೆಬ್ಬೆಟ್ಟು ಒತ್ತಿಸಿಕೊಳ್ಳುವ ಮೂಲಕ ಅಭಿಯಾನ ನಡೆಸಿದರು.