ಅಮೃತಸರ: ಹಬ್ಬದ ದಿನಗಳು ಸಮೀಪಿಸಿದಾಗ ಆದಷ್ಟು ಬೇಗ ವೇತನ ಆದರೆ ಸಾಕು ಎಂದು ಹಂಬಲಿಸುವುದು ಸಾಮಾನ್ಯ. ಹೀಗಿದ್ದಾಗ ಡಬ್ಬಲ್‌ ಸಂಬಳ ಬಂದರೆ ಹೇಗಿರಬೇಡ? ಇಂಥದ್ದೊಂದು ಅಚ್ಚರಿ ಪಂಜಾಬ್‌ನ ಸರ್ಕಾರಿ ನೌಕರರಿಗೆ ಆಗಿದೆ. ರಾಜ್ಯದ ಲಕ್ಷಾಂತರ ನೌಕರರ ಬ್ಯಾಂಕ್‌ ಖಾತೆಗೆ ಅಕ್ಬೋಬರ್‌ ತಿಂಗಳಿನ ವೇತನವನ್ನು ಎರಡು ಬಾರಿ ಹಾಕಲಾಗಿದೆ.

ಇದನ್ನು ನೋಡಿ ಸಿಬ್ಬಂದಿ ಫುಲ್‌ ಖುಷ್‌ ಆಗಿದ್ದರು. ಸರ್ಕಾರ ದೀಪಾವಳಿಗೆ ಉಡುಗೊರೆ ಕೊಟ್ಟಿದೆ ಎಂದೇ ಭಾವಿಸಿದ್ದರು. ಆದರೆ ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಕಾರಣ, ಕ್ಷಮಿಸಿ ತಪ್ಪಾಗಿ, ನಿಮ್ಮ ಖಾತೆಗೆ ಎರಡು ಬಾರಿ ವೇತನ ಹಾಕಲಾಗಿದೆ ಎಂದು ಸರ್ಕಾರ, ನೌಕರರಿಗೆ ಮಾಹಿತಿ ರವಾನಿಸಿದೆ.

ಜೊತೆಗೆ ಹೆಚ್ಚುವರಿಯಾಗಿರುವ ಹಾಕಿರುವ ವೇತನವನ್ನು ಶೀಘ್ರವೇ ಹಿಂದಕ್ಕೆ ಪಡೆಯಲಾಗುವುದು. ಯಾರೂ ಹೆಚ್ಚುವರಿಯಾಗಿರುವ ಹಾಕಿರುವ ವೇತನವನ್ನು ಖಾತೆಯಿಂದ ತೆಗೆದುಕೊಳ್ಳಬಾರದು ಎಂದು ಸರ್ಕಾರ ಎಚ್ಚರಿಸಿದೆ. ಜೊತೆಗೆ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಸ್ಪಷ್ಟಪಡಿಸಿದೆ.

ಪಂಜಾಬ್‌ ಸರ್ಕಾರ ಅಂದಾಜು 2 ಲಕ್ಷ ಕೋಟಿ ರು. ಸಾಲ ಹೊಂದಿದ್ದು, ಮಾಸಿಕ ವೇತನ ನೀಡಲು ಸಂಕಷ್ಟಎದುರಿಸುತ್ತಿದೆ. ಅಂಥದ್ದರಲ್ಲಿ ಎರಡೆರಡು ಬಾರಿ ಸಂಬಳ ನೀಡಿ ಎಡವಟ್ಟು ಮಾಡಿಕೊಂಡಿದೆ.