ಮಹಿಳೆಯನ್ನು ಮನೆಯಿಂದ ಹೊರಗೆಳೆದು ಥಳಿಸಿದ ಕಾಂಗ್ರೆಸ್ ನಾಯಕನ ತಮ್ಮ| ಮಹಿಳೆಯ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ಮಹಿಳೆಗೂ ಹೊಡೆತ| ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರೋಪಿಯ ಬಂಧನ| ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಸ್ಥಿತಿ ಗಂಭೀರ
ಚಂಡೀಗಡ್[ಜೂ.15]: ಪಂಜಾಬ್‌ನ ಮುಕ್ತಸರ್‌ನ ಸ್ಥಲೀಯ ಕಾಂಗ್ರೆಸ್ ನಾಯಕನ ಸಹೋದರ ಹಣಕ್ಕಾಗಿ ಮಹಿಳೆಯೊಬ್ಬಳನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮುಕ್ತಸರ್ ನಗರ ಪಾಲಿಕೆ ಸದಸ್ಯ ರಾಕೆಶ್ ಚೌಧರಿಯ ಸಹೋದರ ಹಾಗೂ ಆತನ ಗೆಳೆಯರು ಸೇರಿ ಮಹಿಳೆಯೊಬ್ಬಳನ್ನು ಆಕೆಯ ಮನೆಯಿಂದ ಹೊರಗೆಳೆದು ತಂದು ಬೆಲ್ಟ್ ಹಾಗೂ ದೊಣ್ಣೆಯಿಂದ ಥಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡಲಾರಂಭಿಸಿದಾಗ ಇಂತಹ ಒಂದು ಅಮಾನವೀಯ ಘಟನೆ ನಡೆದಿದೆ ಎಂಬುವುದು ಬೆಳಕಿಗೆ ಬಂದಿದೆ.
ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಥಳಿಸುತ್ತಿದ್ದ ವೇಳೆ ಆಕೆಯ ಸಹಾಯಕ್ಕೆ ಧಾವಿಸಿದ್ದ ಮತ್ತೊಬ್ಬ ಮಹಿಳೆಯನ್ನೂ ಆರೋಪಿಗಳು ಹೊಡೆದಿದ್ದಾರೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎನ್ನಲಾಗಿದೆ.
ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸ್ ಆಧೀಕ್ಷಕ ಮಂಜೀತ್ ಡೇಸಿ 'ಇದೊಂದು ಅತ್ಯಂತ ಅಮಾನವೀಯ ಕೃತ್ಯ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳುತ್ತೇವೆ ಹಾಗೂ ಯಾವುದೇ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿಲ್ಲದೇ ತನಿಖೆ ನಡೆಸುತ್ತೇವೆ' ಎಂದಿದ್ದಾರೆ.
