ಹಕ್ಕಿ ಜ್ವರ ಪತ್ತೆ ವಿಚಾರವಾಗಿ ವಿಕಾಸಸೌಧದಲ್ಲಿ ನಡೆದ ಅಧಿಕಾರಿಗಳ ಸಭೆ ಮುಕ್ತಾಯಗೊಂಡಿದೆ.  

ಬೆಂಗಳೂರು (ಜ.03): ಹಕ್ಕಿ ಜ್ವರ ಪತ್ತೆ ವಿಚಾರವಾಗಿ ವಿಕಾಸಸೌಧದಲ್ಲಿ ನಡೆದ ಅಧಿಕಾರಿಗಳ ಸಭೆ ಮುಕ್ತಾಯಗೊಂಡಿದೆ.

ನಾಳೆ ಬೆಂಗಳೂರಿಗೆ ಕೇಂದ್ರ ತಂಡ ಆಗಮಿಸಲಿದೆ. ರಾಜ್ಯದ ತಜ್ಞ ತಂಡದ ಸಹಕಾರದೊಂದಿಗೆ ರೋಗ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದೆ ಎಂದು ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ಹೇಳಿದ್ದಾರೆ.

ದಾಸರಹಳ್ಳಿಯ ಕೋಳಿ ಮಾರಾಟ ಅಂಗಡಿಯಲ್ಲಿನ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು ತಮಿಳುನಾಡಿನಿಂದ ಬಂದಂತಹ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಕಳೆದ ವಾರ ತಮಿಳುನಾಡಿನ ಕೋಳಿ ಮಾರಾಟಗಾರರಿಂದ 15 ಕೋಳಿ ಖರೀದಿಸಿದ್ದ ಕೋಳಿ ಮಾರಾಟ ಅಂಗಡಿ ಮಾಲೀಕ ನಾಲ್ಕೈದು ಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯನ್ನು ಕೋಳಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಕೋಳಿಯ ಸ್ಯಾಂಪಲ್ ಪರೀಕ್ಷೆ ನಡೆದಿತ್ತು. ಭೋಪಾಲ್'ನಲ್ಲಿರುವ ಪ್ರಯೋಗಾಲಯಕ್ಕೂ ಸ್ಯಾಂಪಲ್ ರವಾನಿಸಿ ಪರೀಕ್ಷೆ ನಡೆಸಲಾಗಿದೆ . ಪರೀಕ್ಷೆ ಬಳಿಕ ಹಕ್ಕಿ ಜ್ವರ ಇರುವುದು ದೃಡಪಟ್ಟಿದೆ ಎಂದು ರಾಜ್ ಕುಮಾರ್ ಖತ್ರಿ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಎಲ್ಲಿಯಾದರೂ ಶಂಕಿತ ಪ್ರಕರಣಗಳು ಕಂಡು ಬಂದರೆ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಸಹಾಯವಾಣಿ ಸಂಖ್ಯೆ 18004250012, 08023417100 ಸಾರ್ವಜನಿಕರು ಗಾಬರಿ ಆಗುವ ಅಗತ್ಯವಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.