ಮುಂಬೈ (ಡಿ. 25): ಇತ್ತೀಚೆಗೆ ವೈರಲ್ ಆಗಿದ್ದ ಪಬ್ ಜಿ ಆನ್‌ಲೈನ್ ಗೇಮ್ ಅನ್ನು ಮಹಾರಾಷ್ಟ್ರ ಹೈಕೋರ್ಟ್ ಬ್ಯಾನ್ ಮಾಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಹಾರಾಷ್ಟ್ರ ಹೈಕೋರ್ಟ್ ಹೆಸರಿನಲ್ಲಿ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ ‘ಪಬ್ ಜಿ ಆನ್‌ಲೈನ್ ಗೇಮ್ ಸಮಾಜದಲ್ಲಿ ಉಪದ್ರಗಳನ್ನು ಉಂಟುಮಾಡುತ್ತಿದೆ. ವಿದ್ಯಾರ್ಥಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಈಗಾಗಲೇ ಹಲವು ದೇಶಗಳು ಈ ಆಟದ ವಿರುದ್ಧ ಕ್ರಮ ಕೈಗೊಂಡಿವೆ. ಹಾಗಾಗಿ ರಾಜ್ಯದಲ್ಲಿ ಪಬ್‌ಜಿ ಯನ್ನು ನಿಷೇಧಿಸಲಾಗುತ್ತಿದೆ. ಎಲ್ಲಿಯಾದರೂ ಪಬ್ ಜಿ ಆಟವಾಡುವುದು ಕಂಡುಬಂದರೆ ಗೇಮ್ಸ್ ಕಾರ್ಪೋರೇಶನ್‌ಗೆ ನೋಟೀಸ್ ನೀಡಲಾಗುವುದು-ಕೆ.ಶ್ರೀನಿವಾಸುಲು, ಮಹಾರಾಷ್ಟ್ರ ಹೈಕೋರ್ಟ್’ ಎಂದು ಬರೆಯಲಾಗಿದೆ.

ಈ ಪ್ರಕಟಣೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ಮಹಾರಾಷ್ಟ್ರ ಹೈಕೋರ್ಟ್ ಪಬ್ ಜಿಯನ್ನು ಬ್ಯಾನ್ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ಸಾಬೀತಾಗಿದೆ. ಮೊದಲನೆಯದಾಗಿ ಪ್ರಕಟಣೆಯಲ್ಲಿ ಬರೆದಿರುವ ಭಾಷೆಯು ವೃತ್ತಿಪರರ ಭಾಷೆಯಂತಿಲ್ಲ. ಉದಾಹರಣೆಗೆ ಮ್ಯಾಜಿಸ್ಟ್ರೇಟ್ಸ್ ಎಂದು ಬರೆಯುವ ಬದಲಿಗೆ ‘ಮ್ಯಾಜೆಸ್ಟ್ರಾಟೀವ್ಸ್’ ಎಂದು ಬರೆಯಲಾಗಿದೆ. ಹೀಗೆ ಹಲವಾರು ವ್ಯಕರಣ ದೋಷಗಳಿವೆ.
ಅಲ್ಲದೆ ಅದು ಸಾಮಾನ್ಯವಾಗಿ ನೀಡುವ ನೋಟೀಸ್‌ಗಿಂತ ಭಿನ್ನವಾಗಿದೆ.

ಜೊತೆಗೆ ಪ್ರಕಟಣೆಯಲ್ಲಿ ಮಹಾರಾಷ್ಟ್ರ ಹೈಕೋರ್ಟ್ ಹೇಳಿದ್ದಾಗಿ ಹೇಳಿದೆ. ಆದರೆ ಮಹಾರಾಷ್ಟ್ರ ಹೈಕೋರ್ಟ್‌ನಲ್ಲಿ ಆ ಹೆಸರಿನ ಯಾವುದೇ ಜಡ್ಜ್ ಇಲ್ಲ. ಅಲ್ಲದೆ ಪಬ್ ಜಿ ನಿರ್ವಣಾ ಸಂಸ್ಥೆಯೂ ಈ ಬಗ್ಗೆ ಸ್ಪಷ್ಟೀಕರಣ ನೀಡಿ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಪೋಸ್ಟ್ ಸಂಪೂರ್ಣ ಸುಳ್ಳು ಎಂದು ಹೇಳಿದೆ.

-ವೈರಲ್ ಚೆಕ್