ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 85,370 ಕೋಟಿ ರು. ನಷ್ಟಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮತ್ತೊಂದು ಹೊಡೆತ ಬಿದ್ದಿದೆ. ಮಾ.31ಕ್ಕೆ ಮುಕ್ತಾಯಗೊಂಡ 2017-18ನೇ ಹಣಕಾಸು ವರ್ಷದಲ್ಲಿ 1.20 ಲಕ್ಷ ಕೋಟಿ ರು. ಸಾಲವನ್ನು ಸರ್ಕಾರಿ ಬ್ಯಾಂಕುಗಳು ವಸೂಲಾಗದ ಸಾಲ ವಿಭಾಗಕ್ಕೆ ಸೇರಿಸಿವೆ. 

ನವದೆಹಲಿ : ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 85,370 ಕೋಟಿ ರು. ನಷ್ಟಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮತ್ತೊಂದು ಹೊಡೆತ ಬಿದ್ದಿದೆ. ಮಾ.31ಕ್ಕೆ ಮುಕ್ತಾಯಗೊಂಡ 2017-18ನೇ ಹಣಕಾಸು ವರ್ಷದಲ್ಲಿ 1.20 ಲಕ್ಷ ಕೋಟಿ ರು. ಸಾಲವನ್ನು ಸರ್ಕಾರಿ ಬ್ಯಾಂಕುಗಳು ವಸೂಲಾಗದ ಸಾಲ ವಿಭಾಗಕ್ಕೆ ಸೇರಿಸಿವೆ. ಇದು ಕಳೆದ ವಿತ್ತೀಯ ವರ್ಷದಲ್ಲಿ ಬ್ಯಾಂಕುಗಳು ಅನುಭವಿಸಿದ ನಷ್ಟಕ್ಕಿಂತ ಒಂದೂವರೆ ಪಟ್ಟು ಅಧಿಕ ಎಂಬುದು ಗಮನಾರ್ಹ.

ಭಾರಿ ನಷ್ಟ, ಜತೆಗೆ ನಷ್ಟಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ವಸೂಲಾಗದ ವಿಭಾಗಕ್ಕೆ ಸೇರಿಸುವಂತಹ ಎರಡು ಹೊಡೆತಗಳು ಭಾರತೀಯ ಬ್ಯಾಂಕಿಂಗ್‌ ಉದ್ಯಮಕ್ಕೆ ಬೀಳುತ್ತಿರುವುದು ಕಳೆದ ಒಂದು ದಶಕದಲ್ಲಿ ಇದೇ ಮೊದಲು.

40,196 ಕೋಟಿ ರು. ಸಾಲವನ್ನು ಎಸ್‌ಬಿಐ ವಸೂಲಾಗದ ಪಟ್ಟಿಗೆ ಸೇರಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ನಂತರದ ಯಾದಿಯಲ್ಲಿ ಕೆನರಾ ಬ್ಯಾಂಕ್‌ (8310 ಕೋಟಿ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (7407 ಕೋಟಿ) ಹಾಗೂ ಬ್ಯಾಂಕ್‌ ಆಫ್‌ ಬರೋಡಾ (4948 ಕೋಟಿ) ಇವೆ.

ರೈಟ್‌ ಆಫ್‌ ಎಂದರೆ ಸಾಲ ಮನ್ನಾ ಅಲ್ಲ

ರೈಟ್‌ ಆಫ್‌ ಎಂದಾಕ್ಷಣ ಸಾಲ ಮನ್ನಾ ಎಂಬ ಗ್ರಹಿಕೆ ಇದೆ. ಆದರೆ ಅದಲ್ಲ. ಬ್ಯಾಂಕುಗಳು ಯಾರಿಗಾದರೂ ಸಾಲ ನೀಡಿದರೆ ಅದನ್ನು ಆಸ್ತಿ ಎಂದೂ, ಸಾಲ ಪಡೆದವ ಪಾವತಿಸುವ ಬಡ್ಡಿಯನ್ನು ವರಮಾನ ಎಂದೂ ಪರಿಗಣಿಸುತ್ತವೆ. ಸಾಲದಾರ ಸರಿಯಾಗಿ ಸಾಲ ಮರುಪಾವತಿಸುತ್ತಿದ್ದರೆ ಏನೂ ಸಮಸ್ಯೆ ಇಲ್ಲ.

ಬ್ಯಾಂಕಿನ ಆದಾಯ ಹೆಚ್ಚುತ್ತಿರುತ್ತದೆ. ಒಂದು ವೇಳೆ, ಸಾಲಗಾರ ಸಾಲ ಮರುಪಾವತಿಸಲು ವಿಫಲನಾದರೆ, ಬ್ಯಾಂಕು ನೀಡಿರುವ ಸಾಲ ಆದಾಯವಿಲ್ಲದ ಆಸ್ತಿ ಎನಿಸಿಕೊಳ್ಳುತ್ತದೆ. ಅಂತಹ ಆಸ್ತಿಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವ ಬದಲು ಅದನ್ನು ಬ್ಯಾಲೆನ್ಸ್‌ಶೀಟ್‌ನಿಂದ ಬ್ಯಾಂಕುಗಳು ಹೊರಗಿಡುತ್ತವೆ. ಇದರಿಂದ ಅವುಗಳಿಗೆ ತೆರಿಗೆ ಕಟ್ಟುವುದು ತಪ್ಪುತ್ತದೆ. ಹೀಗೆ ಬ್ಯಾಲೆನ್ಸ್‌ಶೀಟ್‌ನಿಂದ ಹೊರಗಿಟ್ಟಹಣಕ್ಕೆ ಸಮನಾದ ಹಣವನ್ನು ತಮ್ಮ ಲಾಭದಿಂದ ತೆಗೆದಿಟ್ಟಿರುತ್ತವೆ. ಇದೇ ರೈಟ್‌ ಆಫ್‌. ಈ ಪ್ರಕ್ರಿಯೆ ಮುಗಿದ ಬಳಿಕವೂ ಸಾಲ ವಸೂಲಾತಿಯನ್ನು ಬ್ಯಾಂಕುಗಳು ನಿಲ್ಲಿಸುವುದಿಲ್ಲ. ಅದು ನಡೆಯುತ್ತಿರುತ್ತದೆ.