ಬೆಂಗಳೂರು[]ಸೆ.07]: ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡದ ವಿರುದ್ಧದ ಸಾರ್ವಜನಿಕರ ಆಕ್ರೋಶ ಇದೀಗ ರಸ್ತೆ ಗುಣಮಟ್ಟದ ಸುಧಾರಣೆ ಮೇಲೆ ತಿರುಗಿದೆ.

ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸರ್ಕಾರ ಪರಿಷ್ಕೃತ ದಂಡ ಅಧಿಸೂಚನೆ ಹೊರಡಿಸುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದರ ಜತೆಗೆ ದಂಡ ವಿಧಿಸುವುದಕ್ಕೆ ಮುಂದಾಗಿರುವ ಸರ್ಕಾರ ಮೊದಲು ಗುಣಮಟ್ಟದ ರಸ್ತೆ ನಿರ್ಮಿಸಿ, ಗುಂಡಿ ಮುಕ್ತಗೊಳಿಸಬೇಕೆಂಬ ಆಗ್ರಹ ವಾಹನ ಸವಾರರು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳು ತೀವ್ರ ಚರ್ಚೆ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ಯಾಂಡಲ್‌ವುಡ್‌ನ ಕೆಲ ಸ್ಟಾರ್‌ಗಳು ದುಬಾರಿ ದಂಡ ವಿಧಿಸಿರುವುದು ಜನ ಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸವಾರರೊಬ್ಬರು ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿ ರಸ್ತೆಯಲ್ಲಿರುವ ಗುಂಡಿಗಳಿಗೆ ಸರ್ಕಾರಕ್ಕೆ ನಾವು ಎಷ್ಟುದಂಡ ವಿಧಿಸಬೇಕು’ ಪ್ರಶ್ನೆ ಮಾಡಿದ್ದಾರೆ. ನಟಿ ಸೋನುಗೌಡ ಅವರು ಮೊದಲು ರಸ್ತೆ ಸರಿಪಡಿಸಿ, ದಂಡದ ಮೊತ್ತ ಕಷ್ಟಪಟ್ಟು ದುಡಿದ ಹಣ, ಅವರ ಜೀವನ ಹಾಳು ಮಾಡಬೇಡಿ ಎಂಬ ಹೇಳಿಕೆಯನ್ನು ನಟ ಉಪೇಂದ್ರ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡುವ ಮೂಲಕ ಬೆಂಬಲಿಸಿದ್ದಾರೆ.

ನಟಿ ಸೋನುಗೌಡ, ಈ ಹಿಂದೆ ಕೂಡ ಮತ್ಸ್ಯ ಕನ್ಯೆ ವೇಷ ತೊಟ್ಟು ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ವಿರುದ್ಧ ಪ್ರತಿಭಟನೆ ಮಾಡಿ ಜನರ ಗಮನ ಸೆಳೆದಿದ್ದರು. ಕಲಾವಿದ ಬಾದಲ್‌ ನಂಜುಂಡ ಸ್ವಾಮಿ ಹಲವು ವರ್ಷಗಳಿಂದ ಬೆಂಗಳೂರಿನ ರಸ್ತೆ ಗುಂಡಿಗಳ ಸುತ್ತ ಕಲಾತ್ಮಕ ಚಿತ್ರಗಳನ್ನು ಬಿಡಿಸಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಪಾಲಿಕೆ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಾ ಬರುತ್ತಿದ್ದು, ಅದಕ್ಕೆ ಸೋನು ಗೌಡ ಸಾಥ್‌ ನೀಡಿದ್ದರು.

ಸಮರೋಪಾದಿಯಲ್ಲಿ ಗುಂಡಿ ಭರ್ತಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌, ಸಮರೋಪಾದಿಯಲ್ಲಿ ಕೆಲಸ ಮಾಡಿ ನಗರದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುತ್ತಿದ್ದೇವೆ. ನಗರದ 1400 ಕಿ.ಮೀ ಉದ್ದದ 470 ಮುಖ್ಯ ರಸ್ತೆಗಳಲ್ಲಿ 800 ಕಿ.ಮೀಗೂ ಅಧಿಕ ಉದ್ದದ ರಸ್ತೆಯನ್ನು ಗುಂಡಿ ಮುಕ್ತಗೊಳಿಸಿದ್ದೇವೆ. ಮುಖ್ಯರಸ್ತೆಯಲ್ಲಿ ಗುಂಡಿ ಮುಚ್ಚುವುದಕ್ಕೆ .12 ಕೋಟಿ, ವಾರ್ಡ್‌ ರಸ್ತೆ ಗುಂಡಿ ಮುಚ್ಚುವುದಕ್ಕೆ ಒಟ್ಟು .46 ಕೋಟಿ ಮೀಸಲಿಡಲಾಗಿದೆ. ಗುಂಡಿ ಮುಚ್ಚುವ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಪಾಲಿಕೆಯ ಹತ್ತು ಎಂಜಿನಿಯರ್‌ಗಳಿಗೆ ಈಗಾಗಲೇ ತಲಾ ಎರಡು ಸಾವಿರ ರು.ಗಳಂತೆ ಒಟ್ಟು .18 ಸಾವಿರ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.