ಮಂಡ್ಯ(ಸೆ.9): ಕಾವೇರಿ ಹೋರಾಟದ ಪ್ರಯುಕ್ತ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆಯ ಕಿಚ್ಚು ಕಾವೇರಿದೆ. ರೈತರು ಮತ್ತು ಹೋರಾಟಗಾರರು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಜಯ್ ಸರ್ಕಲ್'ನಲ್ಲಿ ವಿವಿಧ ಸಂಘಟನೆಗಳ ಸದಸ್ಯರಿಂದ ಮಾನವ ಸರಪಳಿ ನಿರ್ಮಿಸಿ‌ ಒಂಟಿ ಕಾಲಿನಲ್ಲಿ ನಿಂತು ಹೋರಾಟ ವ್ಯಕ್ತಪಡಿಸಿದರೆ, ಕನ್ನಡ ಪರ ಸಂಘಟನೆಯ ಕಾರ್ಯಕರ್ತನೊಬ್ಬ ಬ್ಲೇಡ್'ನಿಂದ ಕೈ ಕುಯ್ದುಕೊಂಡು ಪ್ರತಿಭಟನೆಯ ಕಿಚ್ಚನ್ನು ತೋರ್ಪಡಿಸಿಕೊಂಡಿದ್ದಾನೆ. ಪಟ್ಟಣದ ಹಲವು ಸ್ಥಳಗಳಲ್ಲಿ ಜಯಲಲಿತಾ ಪ್ರತಿಕೃತಿ ಸುಟ್ಟು, ಖಾಲಿ ಕೊಡಗಳನ್ನು ರಸ್ತೆಯಲ್ಲಿ ಉರುಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೇ ಮತ್ತು ಬಸ್ ನಿಲ್ದಾಣ ಬಿಕೋ ಎನ್ನುತ್ತಿವೆ.