ಲಕ್ನೋ(ಫೆ.14): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಆತ್ಮಾಹುತಿ ದಾಳಿ ನಡೆಸುವ ಮೂಲಕ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಅವಂತಿಪುರ್-ಪುಲ್ವಾಮಾ ಮಾರ್ಗ ಮಧ್ಯೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಯೋಧರನ್ನು ಬಲಿ ಪಡೆಯಲಾಗಿದೆ.

ಕಳೆದೊಂದು ದಶಕದ ಅವಧಿಯಲ್ಲೇ ನಡೆದ ಭೀಕರ ದಾಳಿ ಇದಾಗಿದ್ದು, ಇಡೀ ದೇಶ ಆಕ್ರೋಶದ ಉರಿಯಲ್ಲಿ ಬೇಯುತ್ತಿದೆ. ಯೋಧರ ಸಾವಿಗೆ ಪ್ರತೀಕಾರಕ್ಕಾಗಿ ಇಡೀ ದೇಶ ಹಾತೊರೆಯುತ್ತಿದೆ.

ಈ ಮಧ್ಯೆ ಹುತಾತ್ಮ ಯೋಧರ ಪರ ನಿಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ಲಕ್ನೋದಲ್ಲಿ ತಮ್ಮ ಸುದ್ದಿಗೋಷ್ಠಿ ರದ್ದು ಪಡಿಸಿ ಮೌನಾಚರಣೆ ಆಚರಿಸಿದ್ದಾರೆ. ‘ರಾಜಕೀಯ ಮಾತನಾಡಲು ಸುದ್ದಿಗೋಷ್ಟಿ ಕರೆದಿದ್ದೆ. ಆದರೆ ಇದು ರಾಜಕೀಯ ಮಾತನಾಡುವ ಸಮಯವಲ್ಲ. ಇಡೀ ದೇಶ ಹುತಾತ್ಮ ಯೋಧರ ಜೊತೆ ನಿಲ್ಲುವ ಸಮಯ. ಮೌನಾಚರಣೆ ಸಲ್ಲಿಸುವ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ಧೈರ್ಯ ತುಂಬೋಣ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಯೋಧರನ್ನು ಕೆಳದುಕೊಂಡ ಕುಟುಂಬಗಳ ನೋವು ನನಗೆ ಅರಿವಾಗುತ್ತದೆ ಎಂದ ಪ್ರಿಯಾಂಕಾ,  ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ದೇಶ ಇವರ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದರು.