ಬೆಂಗಳೂರು :  ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಕಡ್ಡಾಯವೆಂಬ ಶಿಫಾರಸಿನಿಂದ ಕನ್ನಡಕ್ಕೆ ಎದುರಾಗಿದ್ದ ಆತಂಕ ಸರಿಯುವ ಮುನ್ನವೇ ರಾಜ್ಯಕ್ಕೆ ಮತ್ತೊಂದು ಆಘಾತಕಾರಿ ಸಂಗತಿ ಎದುರಾಗಿದ್ದು, ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಕಲಿಸಬೇಕು ಎಂಬ ಸರ್ಕಾರದ ನೀತಿಯನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಪಠ್ಯಕ್ರಮ ಬೋಧಿಸುತ್ತಿರುವ ಖಾಸಗಿ ಶಾಲೆಗಳು ಸಡ್ಡು ಹೊಡೆದಿವೆ.

ರಾಜ್ಯ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಈಗಾಗಲೇ 2018-19ನೇ ಸಾಲಿನಿಂದ ರಾಜ್ಯದ ಎಲ್ಲಾ ಶಾಲೆಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂಬ ನೀತಿಯನ್ನು ಜಾರಿಗೆ ತಂದಿವೆ. ಈ ನೀತಿಯನ್ವಯ ಈಗಾಗಲೇ ಒಂದು ವರ್ಷ ಕನ್ನಡ ಕಲಿಕೆ ಕಡ್ಡಾಯ ನೀತಿಯನ್ನು ಕೇಂದ್ರೀಯ ಪಠ್ಯಕ್ರಮ ಬೋಧಿಸುವ ಶಾಲೆಗಳು ಜಾರಿಗೂ ತಂದಿವೆ.

ಆದರೆ, ಈಗ ಸರ್ಕಾರದ ನೀತಿ ವಿರುದ್ಧ ಸಡ್ಡು ಹೊಡೆದಿದ್ದು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಂಡಳಿಗಳಿಂದ ಈ ಕುರಿತು ಅಧಿಕೃತ ಆದೇಶ ಹೊರಬೀಳದ ಹೊರತು ಕನ್ನಡ ಕಡ್ಡಾಯ ನೀತಿ ಜಾರಿ ಸಾಧ್ಯವಿಲ್ಲ ಎಂದು ಠೇಂಕರಿಸಿವೆ.

ಖಾಸಗಿ ಶಾಲೆಗಳ ಈ ಮೊಂಡುತನಕ್ಕೆ ಪ್ರತಿಯಾಗಿ ಸರ್ಕಾರವೂ ಕಟು ಎಚ್ಚರಿಕೆ ನೀಡಿದ್ದು, ಕನ್ನಡ ಕಡ್ಡಾಯ ನೀತಿ ಜಾರಿಗೊಳಿಸದಿದ್ದರೆ ಅಂತಹ ಶಾಲೆಗಳಿಗೆ ನೀಡಿರುವ ನಿರಾಕ್ಷೇಪಣ ಪತ್ರ (ಎನ್‌ಓಸಿ) ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ. ಸರ್ಕಾರ ಹಾಗೂ ಖಾಸಗಿ ಶಾಲೆಗಳ ನಡುವೆ ಉಂಟಾಗಿರುವ ಈ ಸಂಘರ್ಷದ ಬಗ್ಗೆ ಚರ್ಚಿಸಿ ಸಮಸ್ಯೆ ಇತರ್ಥಪಡಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜೂ.7ರಂದು ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಡ್ಡಾಯ ನೀತಿ ಪಾಲನೆ ಸಾಧ್ಯವಿಲ್ಲ:

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆಗಳ ಪರವಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕ್ಯಾಮ್ಸ್‌ (ಖಾಸಗಿ ಶಾಲೆಗಳ ಒಕ್ಕೂಟ) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಕನ್ನಡ ಬೋಧನೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಸರ್ಕಾರವನ್ನು ಕೂಡ ಒತ್ತಾಯಿಸಲಾಗಿತ್ತು. ಆದರೆ, ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಕನ್ನಡ ಕಡ್ಡಾಯ ನೀತಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಾಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತಮ್ಮ ಈ ನಿರ್ಧಾರಕ್ಕೆ ಕಾರಣವನ್ನು ವಿವರಿಸಿದ ಅವರು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಇಂಗ್ಲಿಷ್‌ ಬೋಧನೆ ಮಾಡಲಾಗುತ್ತಿದೆ. ದ್ವಿತೀಯ ಭಾಷೆ ಪೋಷಕರ ಆಯ್ಕೆಗೆ ಬಿಡಲಾಗಿದೆ. ದೇಶದ 14 ಭಾಷೆಗಳ ಪೈಕಿ ಒಂದನ್ನು ದ್ವಿತೀಯ ಭಾಷೆಯಾಗಿ ಪೋಷಕರು ಆಯ್ಕೆ ಮಾಡಿಕೊಳ್ಳಬಹುದು. ಒಂದು ತರಗತಿಯಲ್ಲಿ ಹೆಚ್ಚಿನ ಮಕ್ಕಳ ಪೋಷಕರು ಯಾವ ಭಾಷೆಯನ್ನು ಆಯ್ಕೆ ಮಾಡುತ್ತಾರೋ ಆ ಭಾಷೆಯನ್ನು ದ್ವೀತೀಯ ಭಾಷೆಯಾಗಿ ಕಲಿಸಲಾಗುತ್ತಿದೆ.

ಕೇಂದ್ರೀಯ ಪಠ್ಯಕ್ರಮದ ನೀತಿಯಂತೆ ಪೋಷಕರು ಕೇಳಿದ ವಿಷಯಗಳನ್ನು ನಾವು ಬೋಧನೆ ಮಾಡಬೇಕಿದೆ. ತೃತೀಯ ಭಾಷೆಯನ್ನು 6ರಿಂದ 8ನೇ ತರಗತಿ ವರೆಗೆ ಮಾತ್ರ ಬೋಧನೆ ಮಾಡಲಾಗುತ್ತದೆ. ಒಂದರಿಂದ ಐದನೇ ತರಗತಿವರೆಗೆ ತೃತೀಯ ಭಾಷೆ ಬೋಧನೆ ಮಾಡುವಂತಿಲ್ಲ. ಈ ನೀತಿಗೆ ವಿರುದ್ಧವಾಗಿ ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ನೀತಿಯಿದೆ. ಒಂದರಿಂದ 10ನೇ ತರಗತಿಯವರೆಗೂ ಕನ್ನಡ ಕಡ್ಡಾಯವಾಗಿ ಕಲಿಸಬೇಕು ಎಂದು ಸರ್ಕಾರದ ನೀತಿ ಹೇಳುತ್ತದೆ. ಕೇಂದ್ರೀಯ ಪಠ್ಯಕ್ರಮ ಹಾಗೂ ರಾಜ್ಯ ಸರ್ಕಾರದ ನೀತಿ ಎರಡನ್ನೂ ಏಕಕಾಲದಲ್ಲಿ ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.

ರಾಜ್ಯ ಸರ್ಕಾರ ನಿರ್ಲಕ್ಷ್ಯ:

ಈ ಹಿನ್ನೆಲೆಯಲ್ಲಿ ದ್ವಿತೀಯ ಭಾಷೆಯ 14 ಭಾಷೆಗಳ ಆಯ್ಕೆಯ ಬದಲು ಕರ್ನಾಟಕದಲ್ಲಿ ಕನ್ನಡವನ್ನೇ ಕಲಿಸಬೇಕು ಎಂದು ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮನವೊಲಿಸಿ ಈ ಸಂಬಂಧ ಆದೇಶ ಹೊರಡುವಂತೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ನಾವು ಆಗ್ರಹಿಸಿದ್ದೆವು. ಈ ಬಗ್ಗೆ ಮೂರು ತಿಂಗಳ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೇಂದ್ರದ ಮನವೊಲಿಸುವ ಭರವಸೆಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀಡಿದ್ದರು. ಆದರೆ, ಇದುವರೆಗೂ ಈ ದಿಸೆಯಲ್ಲಿ ಸರ್ಕಾರ ಏನೂ ಮಾಡಿಲ್ಲ.

ಒಂದು ವೇಳೆ ರಾಜ್ಯ ಸರ್ಕಾರವು ಕೇಂದ್ರದ ಮನವೊಲಿಸಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಬೋಧಿಸಬೇಕು ಎಂದು ಅಧಿಕೃತ ಆದೇಶ ಹೊರಬೀಳುವಂತೆ ಮಾಡಿದ್ದರೆ, ಕನ್ನಡ ಕಡ್ಡಾಯ ನೀತಿ ಜಾರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಇಂತಹ ಆದೇಶವಿದ್ದರೆ, ಪೋಷಕರು ಕೂಡ ವಿರೋಧ ವ್ಯಕ್ತಪಡಿಸಲು ಕಾನೂನಾತ್ಮಕವಾಗಿ ಅವಕಾಶ ಇರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕನ್ನಡ ಬೋಧನೆ ವಿರೋಧಿಸಿ ಪೋಷಕರು ನ್ಯಾಯಾಲಯದ ಮೊರೆ ಹೋದರೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳು ಹೇಳುವುದೇನು?

ಕರ್ನಾಟಕದಲ್ಲಿ ಕನ್ನಡ ಕಲಿಸಲು ನಾವು (ಖಾಸಗಿ ಶಾಲೆಗಳು) ಸಿದ್ಧರಿದ್ದೇವೆ. ಪ್ರಸ್ತುತ ಹೊÃರಾಜ್ಯದ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ಇಂಗ್ಲಿಷ್‌, ದ್ವಿತೀಯ ಭಾಷೆಯಾಗಿ ಹಿಂದಿ ಮತ್ತು ತೃತೀಯ ಭಾಷೆಯಾಗಿ ತಮ್ಮ ಮಾತೃ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತೃತೀಯ ಭಾಷೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ. ಆದರೆ, ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು, ಈ ವಿಷಯಕ್ಕೂ ಪ್ರಥಮ ಅಥವಾ ದ್ವಿತೀಯ ಭಾಷೆಗೆ ಅನ್ವಯವಾಗುವ ನಿಯಮಗಳನ್ನು ಅಳವಡಿಸಿಕೊಳ್ಳಬೇಕು, ಅಂಕ ನೀಡುವುದು, ಪಾಸ್‌, ಫೇಲ್‌ ಮಾಡುವುದು, ಹೋಮ್‌ವರ್ಕ್, ಮಾಸಿಕ ಪರೀಕ್ಷೆಗಳು ಸೇರಿದಂತೆ ಸಂಪೂರ್ಣವಾಗಿ ಕಲಿಸಬೇಕು ಎಂಬ ನಿಯಮ ಜಾರಿಗೊಳಿಸಿದರೆ ವಿದ್ಯಾರ್ಥಿಗಳು ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಮಗೆ ಕಲಿಸಲು ಕೂಡ ಸಹಾಯವಾಗುತ್ತದೆ.

ಶಾಲೆಗಳ ಮಾನ್ಯತೆ ರದ್ದು: ಸರ್ಕಾರದ ಎಚ್ಚರಿಕೆ

ರಾಜ್ಯದಲ್ಲಿರುವ ಪ್ರತಿಯೊಂದು ಶಾಲೆಯಲ್ಲಿಯೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸದಿದ್ದರೆ ಸಂಬಂಧಪಟ್ಟಶಾಲೆಗಳ ನಿರಾಕ್ಷೇಪಣ ಪತ್ರ (ಎನ್‌ಒಸಿ) ರದ್ದು ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಭಾಷಾ ಕಲಿಕಾ ಅಧಿನಿಯಮ-2015ರ ಪ್ರಕಾರ ರಾಜ್ಯದಲ್ಲಿರುವ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶದ ಅನ್ವಯ ಒಂದರಿಂದ ಹತ್ತನೇ ತರಗತಿವರೆಗೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಕನ್ನಡ ಬೋಧಿಸದಿದ್ದರೆ ಉಗ್ರ ಹೋರಾಟ: ಕರವೇ

ಪ್ರತಿ ಬಾರಿ ಕನ್ನಡ ಬೋಧನೆಗೆ ಒಂದಲ್ಲಾ ಒಂದು ಕ್ಯಾತೆ ತೆಗೆಯುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಹೊಸ ಹುನ್ನಾರವಿದು. ಇಂತಹ ನೆಪಗಳನ್ನು ಮುಂದಿಟ್ಟು ಕನ್ನಡ ಭೋದನೆ ನಿರ್ಲಕ್ಷಿಸಿದರೆ ಈ ಖಾಸಗಿ ಶಾಲೆಗಳ ವಿರುದ್ಧ ಕನ್ನಡಿಗರು ಉಗ್ರ ಹೋರಾಟ ನಡೆಸಬೇಕಾದೀತು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಕಡ್ಡಾಯ ನೀತಿ ಜಾರಿಗೆ ಯಾವುದೇ ತಾಂತ್ರಿಕ ಲೋಪದೋಷಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಕನ್ನಡ ಕಡ್ಡಾಯ ನೀತಿ ಜಾರಿಗೆ ತರಬೇಕು. ಡೊನೇಷನ್‌ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಲೂಟಿ ಹೊಡೆಯುವ ಶಿಕ್ಷಣ ಸಂಸ್ಥೆಗಳು ರಾಜ್ಯದ ಭಾಷೆಯನ್ನು ಬೇಡ ಎನ್ನುವುದು ಸರಿಯಲ್ಲ. ಈಗಾಗಲೇ ಡೊನೇಷನ್‌ ಹಾವಳಿಯಿಂದ ಲಕ್ಷಾಂತರ ಪೋಷಕರು ಬೇಸತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡ ಬೇಡವೆಂದರೆ ನಿಜಕ್ಕೂ ಸಹಿಸುವಂತಹ ಸಂಗತಿಯಲ್ಲ. ಕನ್ನಡವನ್ನು ಬೋಧಿಸದ ಶಾಲೆಗಳ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಂಟು ನೆಪ ಮುಂದು ಮಾಡಿ ಕನ್ನಡ ಕಲಿಕೆ ನಿರ್ಲಕ್ಷಿಸುವ ಧೋರಣೆಯನ್ನು ಈ ಖಾಸಗಿ ಶಾಲೆಗಳು ಹೊಂದಿವೆ. ಈ ಹಿಂದೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಗಳನ್ನೂ ಈ ಶಾಲೆಗಳು ತಿರಸ್ಕರಿಸಿದ್ದವು. ಇದೀಗ ಹೊಸ ಸಮಸ್ಯೆ ಹೇಳಿಕೊಂಡು ಬಂದಿದ್ದಾರೆ. ತಾಂತ್ರಿಕವಾಗಿ ಏನೇ ಅಡಚಣೆಗಳಿದ್ದರೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡಬೇಕು ಎಂದು ಒತ್ತಾಯಿಸಿದರು.