ಕಳೆದ ಗುರುವಾರ ಖಾಸಗಿತನದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ  ಐತಿಹಾಸಿಕ ತೀರ್ಪು ಗೋಹತ್ಯೆ ನಿಷೇಧ ಕಾಯ್ದೆಯ ಮೇಲೂ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಮಹಾರಾಷ್ಟ್ರ ಸರ್ಕಾರದ ಗೋಹತ್ಯಾ ನಿಷೇಧ ಕಾಯ್ದೆಗೆ ಸಂಬಂಧಪಟ್ಟ ಪ್ರಕರಣವೊಂದನ್ನು ಆಲಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಇಂತಹ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ನವದೆಹಲಿ: ಕಳೆದ ಗುರುವಾರ ಖಾಸಗಿತನದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಗೋಹತ್ಯೆ ನಿಷೇಧ ಕಾಯ್ದೆಯ ಮೇಲೂ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಮಹಾರಾಷ್ಟ್ರ ಸರ್ಕಾರದ ಗೋಹತ್ಯಾ ನಿಷೇಧ ಕಾಯ್ದೆಗೆ ಸಂಬಂಧಪಟ್ಟ ಪ್ರಕರಣವೊಂದನ್ನು ಆಲಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಇಂತಹ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ಸರ್ಕಾರವು ಜಾರಿಗೊಳಿಸಿರುವ ಕಾಯ್ದೆಯ ಸೆಕ್ಷನ್ 5-Dಯನ್ವಯ, ರಾಜ್ಯದ ಹೊರಗಡೆಯಿಂದಲೂ ತಂದು ಗೋಮಾಂಸವನ್ನು ಸೇವಿಸುವುದು ಅಪರಾಧವಾಗಿದೆ. ಹಾಗೂ ಸೆಕ್ಷನ್ 9Bಯನ್ವಯ ಪತ್ತೆಯಾದ ಮಾಂಸವು ಹಸು/ ಎತ್ತು/ಕೋಣದ್ದಲ್ಲವೆಂದು ಸಾಬೀತುಪಡಿಸುವ ಹೊಣೆ ಆರೋಪಿಯ ಮೇಲಿದೆ.

ಆದರೆ ಈ ನಿಯಮಗಳನ್ನು ಕಳೆದ ವರ್ಷ ಮೇ. 6ರಂದು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಮಹಾರಾಷ್ಟರ ಸರ್ಕಾರ ಸುಪ್ರೀಂ ಮೆಟ್ಟಿಲೇರಿದೆ. ಈ ಅರ್ಜಿಯನ್ನು ವಿಚಾರಣೆಯನ್ನು ನಡೆಸುತ್ತಿರುವ ನ್ಯಾ. ಏ.ಕೆ.ಸಿಕ್ರಿ ಹಾಗೂ ನ್ಯಾ. ಅಶೋಕ್ ಭೂಷಣ್ ಒಳಗೊಂಡ ಸುಪ್ರೀಂ ಕೋರ್ಟ್'ನ ದ್ವಿಸದಸ್ಯ ಪೀಠವು ಶುಕ್ರವಾರ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಈ ವಿಷಯವನನ್ಉ ವಿಚಾರಣೆ ನಡೆಸುವಾಗ 9-ಸದಸ್ಯ ಪೀಠವು ಗುರುವಾರ ನೀಡಿರುವ ತೀರ್ಪನ್ನು ಕೂಡಾ ಪರಿಗಣಿಸಬೇಕು ಎಂದು ವಾದಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಹೌದು, ಆ ತೀರ್ಪು ಕೂಡಾ ಈ ವಿಷಯಕ್ಕೂ ಸಂಬಂಧಪಡುವುದು' ಎಂದು ಹೇಳಿದೆ.

ಖಾಸಗಿತನ ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬ ಕುರಿತು ವಿಚಾರಣೆ ನಡೆಸುವಾಗ, ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು ಎಂದು ಯಾರಿಗೂ ಹೇಳುವಂತಿಲ್ಲವೆಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ, ಆಹಾರದ ಆಯ್ಕೆಯ ಹಕ್ಕು ಕೂಡಾ ಖಾಸಗಿತನದ ಹಕ್ಕು ವ್ಯಾಪ್ತಿಯೊಳಗೆ ಬರುತ್ತದೆ ಎಂದಿತ್ತು.

ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್, ನಿರುಪಯುಕ್ತ ಗೋವುಗಳ ಹತ್ಯೆಯನ್ನು ಸಂಪೂರ್ಣ ನಿಷೇಧಿಸಿ 2005ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿರುವ ತೀರ್ಪನ್ನು ಕೂಡಾ ಮರುಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.

ಆಹಾರದ ಆಯ್ಕೆಯ ಹಕ್ಕು ಕೂಡಾ ಖಾಸಗಿತನದ ಹಕ್ಕಿನ ಭಾಗವಾಗಿದೆ. ಆದುದರಿಂದ ಆಹಾರದ ಆಯ್ಕೆಯ ಹಕ್ಕು ಕೂಡಾ ಮೂಲಭೂತ ಹಕ್ಕು ಆಗಿದೆ, ಎಂದು ಜೈಸಿಂಗ್ ವಾದಿಸಿದ್ದಾರೆ.

ವಿಚಾರಣೆಯನ್ನು 2 ವಾರಗಳ ಅವಧಿಗೆ ಮುಂದೂಡಿದ ಪೀಠವು, ಆ ವಿಷಯಗಳನ್ನು ಪರಿಗಣಿಸುವುದಾಗಿ ಹೇಳಿದೆ.