ತಿರುವನಂತಪುರ: ಪ್ರಧಾನಿಯಾಗಿ 2ನೇ ಅವಧಿಗೆ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಜೂ.8 ರಂದು ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. 

2 ನೇ ಅವಧಿಗೆ ಪ್ರಧಾನಿಯಾದ ನಂತರ ಮೋದಿ ಅವರ ಮೊದಲ ದಕ್ಷಿಣ ಭಾರತ ಭೇಟಿ ಇದಾಗಿದೆ. ವಿಶೇಷ ಎಂದರೆ, ಅದೇ ದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಕೇರಳದಲ್ಲೇ ಇರುತ್ತಾರೆ.

ಕೇರಳಕ್ಕೆ ಜೂ.8ರಂದು ಬೆಳಗ್ಗೆ 11.30ಕ್ಕೆ ಆಗಮಿಸಲಿರುವ ಮೋದಿ ಅವರು ಸಂಜೆ 4 ಗಂಟೆಗೆ  ಮರಳಲಿದ್ದಾರೆ. ಮಧ್ಯಾಹ್ನದ ವೇಳೆಗೆ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿ 45 ನಿಮಿಷಗಳ ಕಾಲ ಪೂಜೆ ಸಲ್ಲಿಸಲಿದ್ದಾರೆ. ಇನ್ನಿತರೆ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

ತಮ್ಮನ್ನು  ಆಯ್ಕೆ ಮಾಡಿದ ವಯನಾಡು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ರಾಹುಲ್ ಅವರು ಜೂ. 7 ಹಾಗೂ 8 ರಂದು ಕೇರಳ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದ್ದಾರೆ.